ಕೋಲಾರ : ದೇಶದಲ್ಲೇ ಮೊದಲ ಬಾರಿಗೆ ಗ್ರಾಹಕರ ಅಲೆದಾಟ ತಪ್ಪಿಸಿ ಮನೆಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವ ಅಪರೂಪದ ಯೋಜನೆಯನ್ನು ಡಿಸಿಸಿ ಬ್ಯಾಂಕ್ ಕಾರ್ಯಗತಗೊಳಿಸಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆ ಮತ್ತು ಗೌರವದ ವಿಷಯ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ಮುಂಭಾಗ ಶನಿವಾರ ಮೊಬೈಲ್ ಬ್ಯಾಂಕಿಂಗ್ ವಾಹನದಲ್ಲಿ ಮೈಕ್ರೋ ಎಟಿಎಂ ಹಾಗೂ ವಹಿವಾಟಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಹಕರ ಮನೆಬಾಗಿಲಿಗೆ ಸೇವೆ ಒದಗಿಸಿದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಾನೂ ಡಿಸಿಸಿ ಬ್ಯಾಂಕಿಗೆ ನಿರ್ದೇಶಕನಾಗಿದ್ದೆ, ಆದರೆ ದಿವಾಳಿಯಾಗಿದ್ದ ಬ್ಯಾಂಕನ್ನು ಇಷ್ಟೊಂದು ವೇಗದಲ್ಲಿ ದೇಶಕ್ಕೆ ನಂ.1 ಮಾಡಿರುವ ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ ಎಂದರು. ಆರ್ಥಿಕ ವಹಿವಾಟು ಡಿಜಟಲೀಕರಣಗೊಳ್ಳುತ್ತಿದೆ, ಬೆರಳ ತುದಿಯಲ್ಲಿ ಬ್ಯಾಂಕಿಂಗ್ ಸೇವೆ ಒದಗಿಸುವಷ್ಟು ವೇಗದಲ್ಲಿ ತಾಂತ್ರಿಕತೆ ಬೆಳೆದಿದೆ. ಇಂತಹ ಸಂದರ್ಭದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನೆಬಾಗಿಲಿಗೆ ಸೌಲಭ್ಯ ಕಲ್ಪಿಸಿರುವುದು ಮಾತ್ರವಲ್ಲ, ಹಣ ಡ್ರಾ, ಸಂದಾಯಕ್ಕೆ ರಸೀದಿ ನೀಡಿ ಪಾರದರ್ಶಕ ವಹಿವಾಟು ನಡೆಸಿ ಮುಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿ, ಬ್ಯಾಂಕ್ ಹೊಸ ಮನ್ವಂತರದಡಿ ಬಡವರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ನೀಡುತ್ತಿದೆ. ಮಹಿಳೆಯರು ಡಿಸಿಸಿ ಬ್ಯಾಂಕಿನಲ್ಲೇ ವೈಯಕ್ತಿಕ ಖಾತೆ ತೆರೆದು ಉಳಿತಾಯದ ಹಣ ಠೇವಣಿ ಇಡಿ, ಲಕ್ಷ್ಮೀ ಬಾಂಡ್ ಖರೀದಿಸಿ ಹೆಚ್ಚಿನ ಬಡ್ಡಿಯ ಲಾಭ ಪಡೆಯಬೇಕು ಎಂದರು.
ಡಿಸಿಸಿ ಬ್ಯಾಂಕ್ ಮಹಿಳೆಯರ ತವರು ಮನೆಯಿದ್ದಂತೆ, ನಿಮಗೆ ಅರಿಶಿಣ, ಕುಂಕುಮ, ಹೂವಿನೊಂದಿಗೆ ಸಾಲ ನೀಡುತ್ತೇವೆ, ಅಲೆದಾಡಿಸುವುದಿಲ್ಲ. ನಿಮ್ಮ ಉಳಿತಾಯದ ಹಣ ವಾಣಿಜ್ಯ ಬ್ಯಾಂಕುಗಳಲ್ಲಿದ್ದರೆ ಕೂಡಲೆ ಡಿಸಿಸಿ ಬ್ಯಾಂಕಿಗೆ ತನ್ನಿ ಎಂದರು. ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ನರಸಾಪುರ ಎಸ್‌ಎಫ್‌ಸಿಎಸ್ ಅಧ್ಯಕ್ಷ ಕೆ.ಎಂ.ಮುನಿರಾಜು, ಸಹಕಾರಿ ಯೂನಿಯನ್ ನಿರ್ದೇಶಕ ಅಣ್ಣಿಹಳ್ಳಿ ನಾಗರಾಜ್, ಪ್ರಗತಿಪರ ರೈತ ನೆನುಮನಹಳ್ಳಿ ಚಂದ್ರಶೇಖರ್, ಸಮಾಜ ಸೇವಕ ನಾರಾಯಣಸ್ವಾಮಿ, ಶಾಖಾ ವ್ಯವಸ್ಥಾಪಕ ಅಂಬರೀಷ್, ಅಮೀನಾ ಉಪಸ್ಥಿತರಿದ್ದರು. ಹೋಳೂರಿನ ಎಚ್.ಕೆ.ನಾಗರಾಜ್ 75,000 ರೂ.ಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡುವುದಾಗಿ ಘೋಷಿಸಿದರು.
ಬ್ಯಾಂಕ್‌ನಿಂದ ಕ್ರಾಂತಿಕಾರಕ ಹೆಜ್ಜೆ: ಕಿಸಾನ್ ಲಕ್ಷ್ಮೀ ಬಾಂಡ್ ಕುರಿತು ಮಹಿಳೆಯರಿಗೆ ಮಾಹಿತಿ ನೀಡುವಲ್ಲಿ ವಿಫಲವಾಗಿರುವ ಬ್ಯಾಂಕ್ ಸಿಬ್ಬಂದಿಯನ್ನು ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ತರಾಟೆಗೆ ತೆಗೆದುಕೊಂಡರು. ಡಿಸಿಸಿ ಬ್ಯಾಂಕ್ ಅವಿಭಜಿತ ಜಿಲ್ಲೆಯ 4.5 ಲಕ್ಷ ಮಹಿಳೆಯರಿಗೆ ಶೂನ್ಯಬಡ್ಡಿ ಸಾಲ ವಿತರಿಸುವ ಮೂಲಕ ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ. ತಾಯಂದಿರ 320 ಕೋಟಿ ಠೇವಣಿ ಇದೆ. ನೀವು ಇಡುವ ಠೇವಣಿ ಹಾಗೂ ಉಳಿತಾಯ ಹಣದಿಂದ ಇತರ ಸಂಘಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.