ಜಿಲ್ಲೆ

ಬಂಕಾಪುರ: ಕಾರವಾರ-ಇಳಕಲ್ ದ್ವಿಪಥ ರಸ್ತೆ ಧೂಳುಮಯ

ಬಂಕಾಪುರ: ಪಟ್ಟಣದ ಮಧ್ಯ ಭಾಗದಲ್ಲಿ ಹಾಯ್ದು ಹೋಗಿರುವ ಕಾರವಾರ-ಇಳಕಲ್ ದ್ವಿಪಥ ರಸ್ತೆಯ ಕೆನರಾ ಬ್ಯಾಂಕ್ ಹತ್ತಿರ ಜೆಸಿಬಿ ಯಂತ್ರದಿಂದ ರಸ್ತೆಯನ್ನು ಅಗೆದು ಪೈಪ್​ಲೈನ್ ಕಾಮಗಾರಿ ಮಾಡಲಾಗಿದೆ. ಆದರೆ, ರಸ್ತೆಯನ್ನು ಸರಿಯಾಗಿ ಮುಚ್ಚದೇ ಮಣ್ಣು ಹಾಕಿ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ರಸ್ತೆ ಮಧ್ಯೆ ಗುಂಡಿ ಬಿದ್ದಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಅಗೆದಿರುವ ರಸ್ತೆಯ ಎರಡೂ ಬದಿ ಖಾಸಗಿ ಆಸ್ಪತ್ರೆ, ಕೆನರಾ ಬ್ಯಾಂಕ್, ಎಂ.ಜಿ. ಬ್ಯಾಂಕ್, ಪೆಟ್ರೋಲ್ ಪಂಪ್, ಕಿರಾಣಿ ಅಂಗಡಿ ಸೇರಿದಂತೆ ಅನೇಕ ಮಾರಾಟ ಮಳಿಗೆಗಳಿವೆ. ನಿತ್ಯ ನೂರಾರು ಜನರು, ವಾಹನಗಳು ಈ ರಸ್ತೆ ಮೇಲೆಯೇ ಸಂಚರಿಸುತ್ತವೆ. ವಾಹನ ಹೋದಾಗಲೊಮ್ಮೆ ಮಣ್ಣಿನ ಧೂಳು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದೆ. ಪಕ್ಕದಲ್ಲಿ ಆಸ್ಪತ್ರೆ ಇರುವುದರಿಂದ ಆಸ್ಪತ್ರೆಗೆ ಬರುವ ಮಕ್ಕಳು, ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಅಕ್ಕ ಪಕ್ಕದ ಅಂಗಡಿ ಮಾಲೀಕರು, ಬ್ಯಾಂಕಿಗೆ ಬರುವ ಗ್ರಾಹಕರು ಕೆಲಸ ಮುಗಿಯುವವರೆಗೂ ಮೂಗು ಮುಚ್ಚಿಕೊಂಡು ನಿಲ್ಲುವಂತಾಗಿದೆ. ಶಾಲಾ ಮಕ್ಕಳು, ಮಹಿಳೆಯರು ಧೂಳಿನಿಂದ ಅನಾರೋಗ್ಯಕ್ಕೀಡಾಗುವ ಭೀತಿ ಎದುರಾಗಿದೆ.

ಕೂಡಲೇ ಕಾಮಗಾರಿ ಕೈಗೊಂಡಿರುವ ಖಾಸಗಿ ವ್ಯಕ್ತಿಗಳಾಗಲಿ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗೆ ಸ್ಪಂದಿಸಬೇಕು. ಕೂಡಲೇ ರಸ್ತೆಗೆ ಡಾಂಬರೀಕರಣ ಮಾಡಿ ಸಾರ್ವಜನಿಕರನ್ನು ಧೂಳಿನಿಂದ ಮುಕ್ತಗೊಳಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

ಬಂಕಾಪುರ ಭಾಗದಲ್ಲಿ ಅಲ್ಲಲ್ಲಿ ಕಿತ್ತು ಹೋಗಿರುವ ರಸ್ತೆಗೆ ನಮ್ಮ ಇಲಾಖೆಯಿಂದ ಡಾಂಬರ್ ಹಾಕುವ ಕೆಲಸ ಪ್ರಗತಿಯಲ್ಲಿದೆ. ಇತ್ತೀಚೆಗೆ ಪಟ್ಟಣದ ಕಾರವಾರ-ಇಳಕಲ್ ರಸ್ತೆ ಅಗೆದಿರುವ ಮಾಹಿತಿ ಇರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಗುಂಡಿ ಮುಚ್ಚಲು ಕ್ರಮ ವಹಿಸಲಾಗುವುದು. | ಪವನಕುಮಾರ ಗುಬ್ಬೇರ, ಎ.ಇ. ಲೋಕೋಪಯೋಗಿ ಇಲಾಖೆ ಶಿಗ್ಗಾಂವಿ