ಬಂಕಾಪುರ: ಕೇಬಲ್ ತುಂಡಾದ ವಿಷಯಕ್ಕೆ ಸಂಬಂಧಿಸಿದಂತೆ ದಲಿತ ವ್ಯಕ್ತಿ ಮೇಲೆ ದೌರ್ಜನ್ಯವೆಸಗಿದ ಘಟನೆ ಶಿಗ್ಗಾಂವಿ ತಾಲೂಕಿನ ಮೂಕಬಸರಿಕಟ್ಟಿ ಗ್ರಾಮದಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಮೂಕಬಸರಿಕಟ್ಟಿ ಗ್ರಾಮದ ರಾಮಪ್ಪ ದುರಗಪ್ಪ ಹರಿಜನ ದೌರ್ಜನ್ಯಕ್ಕೊಳಗಾದ ವ್ಯಕ್ತಿ. ರಾಮಪ್ಪನಿಗೆ ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾಮಪ್ಪನನ್ನು ಕಂಬಕ್ಕೆ ಕಟ್ಟಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಬಂಕಾಪುರ ಠಾಣೆ ಪಿಎಸ್‌ಐ ನಿಂಗಪ್ಪ ಕರಕನ್ನವರ ಹಾಗೂ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ದಲಿತರ ಮನೆಗೆ ಭದ್ರತೆ ಒದಗಿಸಿದ್ದಾರೆ. ಹಲ್ಲೆ ಮಾಡಿದ ಮೂಕಬಸರಿಕಟ್ಟಿ ಗ್ರಾಮದ ಖಲಂದರಸಾಬ್ ಮದರಸಾಬ್ ರಾಜೇಸಾಬನವರ, ರಬ್ಬಾನಿ ರಹಿಮಾನಸಾಬ್ ರಾಜೇಸಾಬನವರ, ಜಹೀರಅಹ್ಮದ ಸವಣೂರ, ಮೋದಿನಸಾಬ್ ಬಾಬಾಜಾನ ರಾಜೇಸಾಬನವರ, ಆದಮ್‌ಸಾಬ್ ಬಾಬಾಜಾನ ರಾಜೇಸಾಬನವರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ಹಿನ್ನಲೆ: ಮೂಕಬಸರಿಕಟ್ಟಿ ಗ್ರಾಮದ ರಾಮಪ್ಪ ಅವರ ಮನೆಯ ಮುಂದೆ ಇದ್ದ ಮರದ ಟೊಂಗೆಗಳು ವಿದ್ಯುತ್ ಕಂಬಕ್ಕೆ ತಾಗಿದ್ದವು. ಹೀಗಾಗಿ, ಹೆಸ್ಕಾಂ ಸಿಬ್ಬಂದಿ ಮರದ ಟೊಂಗೆಗಳನ್ನು ಕತ್ತರಿಸಿದ್ದಾರೆ. ಈ ವೇಳೆ ರಾಮಪ್ಪ ಅವರ ಮನೆ ಮುಂದೆ ಹಾದು ಹೊಗಿದ್ದ ಡಿಶ್ ಟಿವಿ ಕೇಬಲ್ ಆಕಸ್ಮಿಕವಾಗಿ ತುಂಡಾಗಿದೆ. ಕುಪಿತಗೊಂಡ ಆರೋಪಿತರರು ರಾಮಪ್ಪನೇ ವೈರ್ ಕಟ್ ಮಾಡಿದ್ದಾನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಮೂಕಬಸರಿಕಟ್ಟಿ ಗ್ರಾಮದಲ್ಲಿ ದಲಿತ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫಿರ್ಯಾದಿದಾರರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದ್ದು, ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಇನ್ನೊಬ್ಬ ಆರೋಪಿ ಆಸ್ಪತ್ರೆಯಲ್ಲಿದ್ದಾನೆ. ಆತ ಗುಣವಾದ ಬಳಿಕ ಆತನನ್ನು ದಸ್ತಗಿರಿ ಮಾಡಲಾಗುವುದು.ಡಾ. ಶಿವಕುಮಾರ ಗುಣಾರೆಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾವೇರಿ
ದಲಿತರ ಮೇಲೆ ಇತ್ತೀಚೆಗೆ ಸಚಿವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ದಲಿತ ಕುಟುಂಬದ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.ಬಸವರಾಜ ಕಟ್ಟಿಮನಿದಲಿತ ಸಂಘರ್ಷ ಸಮಿತಿ ಕಾರ್ಯಾಧ್ಯಕ್ಷ