ತಿಪಟೂರು: ಬ್ಯಾಂಕನ್ನು ಕಾಡಿದ ಹಣದ ಕೊರತೆ ಮತ್ತು ಸರ್ವರ್ ಸಮಸ್ಯೆಯಿಂದ ನೂರಾರು ಮಂದಿ ಬೆಳಗ್ಗೆಯಿಂದ ಸಂಜೆವರೆಗೂ ನರಳಬೇಕಾಯಿತು.
ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡೆಣ್ಣೇಗೆರೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಗುಂಪು ಸಾಲ ಪಡೆದ ನೂರಾರು ಫಲಾನುಭವಿಗಳಿಗೆ ನೀಡಲಾದ ಚೆಕ್ ಅನ್ನು ಮಂಗಳವಾರ ನಗರದ ಕಾರ್ಪೋರೇಷನ್ ಬ್ಯಾಂಕ್‌ನಲ್ಲಿ ನಗದೀಕರಿಸಿಕೊಳ್ಳಲು ಸೂಚಿಸಲಾಗಿತ್ತು, ಸಣ್ಣ, ಪುಟ್ಟ ಮಕ್ಕಳೊಂದಿಗೆ ಬೆಳಗ್ಗೆಯೇ ಹಣ ಪಡೆಯಲು ಬಂದವರನ್ನು ಸಾಕಷ್ಟು ಹಣವಿಲ್ಲದ ಕಾರಣ ಮಧ್ಯಾಹ್ನದವರೆಗೂ ಕಾಯಿಸಲಾಯಿತು. ಮಧ್ಯಾಹ್ನದ ನಂತರ ಹಣ ಪಾವತಿಗೆ ಮುಂದಾದಾಗ ಸರ್ವರ್ ಕೈಕೊಟ್ಟಿದೆ ಎನ್ನಲಾಗಿದ್ದು, ಗ್ರಾಹಕರು ಮತ್ತು ಬ್ಯಾಂಕ್ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಮತ್ತು ಸಿಬ್ಬಂದಿ ವೈಯಕ್ತಿಕ ಹೊಣೆಯ ಮೇರೆಗೆ ಸರ್ವರ್ ಹೊರತಾಗಿಯೂ ಹಣ ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ಪರಿಣಾಮ ಹಣ ವಿತರಿಸಲು ಬ್ಯಾಂಕ್‌ನವರು ಒಪ್ಪಿದರು.
ಹಣ ಕೊಂಡೊಯ್ಯುವ ಚಿಂತೆ: ದೊಡ್ಡೆಣ್ಣೆಗೆರೆ ಸುತ್ತಮುತ್ತಲ 60ಕ್ಕೂ ಹೆಚ್ಚು ಸದಸ್ಯರಿಗೆ ಅಂದಾಜು ಒಂದು ಲಕ್ಷ ರೂಪಾಯಿಯಂತೆ ಸಾಲ ಮಂಜೂರು ಮಾಡಲಾಗಿದ್ದು, ರಾತ್ರಿ ದೊಡ್ಡ ಮೊತ್ತದ ಹಣದೊಂದಿಗೆ ಊರಿಗೆ ಹೇಗೆ ಹೋಗುವುದೆಂಬ ಆತಂಕ ಕೆಲವರನ್ನು ಕಾಡಿತು. ಇದೇ ದಿನ ನಗರದ ಸದಸ್ಯರಿಗೂ ಚೆಕ್ ನೀಡಿದ್ದು ಹೆಚ್ಚಿನ ಒತ್ತಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದೇ ವೇಳೆ ಬ್ಯಾಂಕ್‌ನ ಸಮರ್ಪಕ ಸೇವೆಯ ಬಗ್ಗೆ ಅತೃಪ್ತಿ ವ್ಯಕ್ತವಾಗಿದ್ದು, ಬೇರೆ ಬ್ಯಾಂಕ್‌ನಲ್ಲಿ ಸಂಘದ ಖಾತೆ ತೆರೆಯುವ ಬಗ್ಗೆ ಸಂಘದ ಸಿಬ್ಬಂದಿ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಿದ್ದಾರೆ ಎನ್ನಲಾಗಿದೆ. ಕರೊನಾ ಸೊಂಕಿನ ಭೀತಿ ಎಲ್ಲೆಡೆ ಕಂಡು ಬರುತ್ತಿದ್ದು, ಸುರಕ್ಷತಾ ದೃಷ್ಟಿಯಿಂದ ನೂರಾರು ಸದಸ್ಯರಿಗೆ ಒಂದೇ ಬಾರಿ ಚೆಕ್ ನೀಡಬಾರದಿತ್ತು ಎಂಬ ಮಾತು ಕೇಳಿಬರುತ್ತಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಚೋರಗೊಂಡನಹಳ್ಳಿ ಸೇರಿ ಯಲ್ಲೇನಹಳ್ಳಿ, ಮತಿಘಟ್ಟ, ಬೆಳಗುಲಿ, ಮಲ್ಲಿಗೆರೆ, ದೊಡ್ಡೆಣ್ಣೆಗೆರೆಯ ಸದಸ್ಯರು ಹಣ ಪಡೆದಿದ್ದು, ಬ್ಯಾಂಕಿನ ಸಮಸ್ಯೆಯಿಂದ ತಡವಾಗಿ ಊರಿಗೆ ಹೋಗುವಂತಾಗಿದೆ. ಸುರಕ್ಷತೆ ಕಾಡುತ್ತಿದೆ. ಚಿಕ್ಕನಾಯಕನಹಳ್ಳಿಯಲ್ಲೇ ಬ್ಯಾಂಕ್ ಶಾಖೆ ತೆರೆದರೆ ಒಳ್ಳೆಯದು. ರೇಣುಕಾ ಮೂರ್ತಿ ದೊಡ್ಡೆಣ್ಣೇಗೆರೆ, ಚಿಕ್ಕನಾಯಕನಹಳ್ಳಿ ತಾಲೂಕು