ಜಿಲ್ಲೆ

ಸಾಲ ಮರುಪಾವತಿ ಮಾಡಲು ವಿಫಲ; ಮಹಿಳೆಯ ಕಪಾಳಕ್ಕೆ ಹೊಡೆದು, ಸ್ಥಳದಿಂದ ಕಾಲ್ಕಿತ್ತ ಬ್ಯಾಂಕ್ ಸಿಬ್ಬಂದಿ!

ಬಾಗಲಕೋಟೆ: ಮಹಿಳೆಯೊಬ್ಬರು ಖಾಸಗಿ ಬ್ಯಾಂಕ್​ನಿಂದ ಪಡೆದುಕೊಂಡ ಹಣವನ್ನು ಹಿಂತಿರುಗಿಸಲು ವಿಫಲವಾಗಿದ್ದಾರೆ. ಈ ವಿಚಾರವನ್ನು ಆಕೆಯ ಮನೆಯ ಬಾಗಿಲಿಗೆ ತಂದ ಬ್ಯಾಂಕ್​ನ ರಿಕವರಿ ಸಿಬ್ಬಂದಿ ಈ ಕೂಡಲೇ ಹಣ ಮರುಪಾವತಿ ಮಾಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ತೀವ್ರ ವಾಗ್ವಾದಕ್ಕೆ ತಿರುಗಿದೆ. ಏಕಾಏಕಿ ಮಹಿಳೆಯ ಕಪಾಳಕ್ಕೆ ಹೊಡೆದ ಆತ, ನಂತರದಲ್ಲಿ ಜನರು ಸೇರುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಸಾಲ ವಸೂಲಿಗೆ ಬಂದ ಖಾಸಗಿ ಬ್ಯಾಂಕ್ ರಿಕವರಿ ಸಿಬ್ಬಂದಿ, ಮಹಿಳೆ ಸಾಲ ಕಟ್ಟದ ಕಾರಣ ಆಕೆಯ ಕಪಾಳಕ್ಕೆ ಹೊಡೆದು ದುರ್ವರ್ತನೆ ತೋರಿದ್ದಾನೆ. ಮಹಿಳೆಯನ್ನು ರುಕ್ಸಾನಾ ಎಂದು ಹೇಳಲಾಗಿದ್ದು, ಬ್ಯಾಂಕ್ ರಿಕವರಿ ಸಿಬ್ಬಂದಿಯನ್ನು ರಾಜೇಸಾಬ್ ಎಂದು ಗುರುತಿಸಲಾಗಿದೆ. ಘಟನೆ ಬಾಗಲಕೋಟೆಯ ಜಮಖಂಡಿ ನಗರದ ಜೋಗಿಮಡ್ಡಿ ಕಾಲೋನಿಯಲ್ಲಿ ವರದಿಯಾಗಿದೆ.

ವಸೂಲಿಯ ಜಟಾಪಟಿ ವೇಳೆ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಲ್ಲದೇ ಆಕೆಯ ಮೊಬೈಲ್‌ ಕಸಿದುಕೊಂಡಿದ್ದಾನೆ. ಹಣ ಕೊಟ್ಟರೆ ಮಾತ್ರ ಮೊಬೈಲ್ ಕೊಡೋದಾಗಿ ಬ್ಯಾಂಕ್ ಸಿಬ್ಬಂದಿ ಎಚ್ಚರಿಸಿದ್ದಾನೆ. ಘಟನೆ ಸೋಮವಾರ ಸಂಭವಿಸಿದ್ದೇ ಆದರೂ ಇದೀಗ ತಡವಾಗಿ ಬೆಳಕಿಗೆ ಬಂದಿದೆ.