ಜಿಲ್ಲೆ

ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ವಿದ್ಯಾನಗರ ಶಿರೂರ ಪಾರ್ಕ್ ಕೋಠಾರಿ ಹೌಸ್​ನಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ವಿದ್ಯಾನಗರ ಶಾಖಾ ಕಚೇರಿಯ ಉದ್ಘಾಟನೆ ಗುರುವಾರ ನಡೆಯಿತು. ಬ್ಯಾಂಕ್​ನಿಂದ ನಗರದಲ್ಲಿ 6ನೇ ಹಾಗೂ ರಾಜ್ಯದಲ್ಲಿ 95ನೇ ಶಾಖೆ ಇದಾಗಿದೆ.

ಉದ್ಘಾಟನೆ ನೆರವೇರಿಸಿದ ಹುಬ್ಬಳ್ಳಿ ಜೆಎಂಎಫ್​ಸಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೇಹನುಮಂತಪ್ಪ ಮಾತನಾಡಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಬ್ಯಾಂಕ್​ಗಳು ದೊಡ್ಡ ಕೊಡುಗೆಯನ್ನು ನೀಡುತ್ತಿವೆ. ಜನರ ಜೀವನಸ್ತರವನ್ನು ಸುಧಾರಿಸುವ ಮೂಲಕ ಸಮಾಜದ ಅಭಿವೃದ್ಧಿಯಲ್ಲೂ ಸಹಯೋಗ ಕೊಡುತ್ತಿವೆ. ನಾವೆಲ್ಲರೂ ಒಟ್ಟಾಗಿ ಸದೃಢ, ವೈವಿಧ್ಯಮಯ ಹಾಗೂ ಆರ್ಥಿಕವಾಗಿ ಸುಧಾರಿತ ಸಮಾಜವನ್ನು ಕಟ್ಟಬೇಕಿದೆ ಎಂದರು.

ಲೆಕ್ಕ ಪರಿಶೋಧಕ ಎಸ್.ಬಿ. ಶೆಟ್ಟಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬ್ಯಾಂಕ್​ಗಳು ಸೇವಾ ಮನೋಭಾವದೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಗಮನ ಹರಿಸಬೇಕಿದೆ. ಗ್ರಾಹಕರ ಅಗತ್ಯಗಳನ್ನು ಮನಗಂಡು ಅದಕ್ಕೆ ತಕ್ಕಂತೆ ಸೇವೆಯನ್ನು ಒದಗಿಸಬೇಕು ಎಂದು ಹೇಳಿದರು.

ಬ್ಯಾಂಕಿನ ಹುಬ್ಬಳ್ಳಿ ವಲಯ ವ್ಯವಸ್ಥಾಪಕ ಸುಚೇತ ಡಿಸೋಜಾ ಮಾತನಾಡಿ, ಬ್ಯಾಂಕ್​ನ್ನು ಜನಸಾಮಾನ್ಯ ಬಳಿಗೆ ಕೊಂಡೊಯ್ಯುವುದು ಹಾಗೂ ಬ್ಯಾಂಕಿಂಗ್ ಸೇವೆಗಳು ಸರಳ ಮತ್ತು ಸುಲಲಿತವಾಗಿ ಸಿಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ 49 ಶಾಖೆಗಳನ್ನು ತೆರೆಯುವ ಮೂಲಕ ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಅವಕಾಶಗಳನ್ನು ಸೃಷ್ಟಿಸಿದ್ದೇವೆ ಎಂದರು.

ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಡಿಜಿಟಲ್ ಸೇವೆಗಳನ್ನು ಪ್ರಸ್ತುತಪಡಿಸಿದ್ದೇವೆ. ಸುರಕ್ಷತೆ ಮತ್ತು ಭದ್ರತೆಯ ಅತ್ಯುನ್ನತ ಮಾನದಂಡಗಳನ್ನು ಒಳಗೊಂಡ ವಾಟ್ಸಆಪ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಇಂಟನ್​ನೆಟ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಪರಿಚಯಿಸಿದ್ದೇವೆ ಎಂದು ತಿಳಿಸಿದರು.

ಹುಬ್ಬಳ್ಳಿ ಜೆಎಂಎಪ್​ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ವಿಶ್ವನಾಥ ಯಮಕನಮರಡಿ ಇದ್ದರು.