ಮಡಿಕೇರಿ: ಬ್ಯಾಂಕ್‌ಗಳು ರಾಷ್ಟ್ರೀಕರಣಗೊಂಡ ನಂತರ ಬಡವರು, ಜನಸಾಮಾನ್ಯರು ಸೇರಿದಂತೆ ಎಲ್ಲಾ ವರ್ಗದವರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಹೇಳಿದರು.
ಮಡಿಕೇರಿ ನಗರದ ಮುಖ್ಯ ಶಾಖೆಯಲ್ಲಿ ಆಯೋಜಿಸಿದ್ದ ಬ್ಯಾಂಕ್ ಆಫ್ ಬರೋಡದ ೧೧೫ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್‌ಗಳು ರಾಷ್ಟ್ರೀಕರಣಗೊಂಡ ನಂತರ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ. ಖಾಸಗಿ ಬ್ಯಾಂಕ್‌ಗಳಿಗೆ ಹೋಲಿಕೆ ಮಾಡಿದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವ್ಯವಹಾರ ಬಹಳ ಸುಲಭವಾಗಿದೆ. ಸಾಲಗಳ ನಿಯಮ ಸಡಿಲವಿರುತ್ತದೆ ಮತ್ತು ಆರ್ಥಿಕ ಪ್ರಗತಿಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಬ್ಯಾಂಕ್‌ಗಳ ಸೌಲಭ್ಯಗಳನ್ನು ಯುವ ಸಮೂಹ ಸದುಪಯೋಗ ಪಡಿಸಿಕೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಸಿಗುವ ಯೋಜನೆಗಳ ಲಾಭವನ್ನು ಪಡೆದುಕೊಂಡು ಯುವಕ, ಯುವತಿಯರು ಆರ್ಥಿಕವಾಗಿ ಸದೃಢರಾಗಬೇಕೆಂದು ಕರೆ ನೀಡಿದರು.
ಶಾಖಾ ವ್ಯವಸ್ಥಾಪಕ ಲಕ್ಷ್ಮೀಕಾಂತ್ ನಾಯಕ್ ಮಾತನಾಡಿ, ಬ್ಯಾಂಕ್ ಆಫ್ ಬರೋಡ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಸುದೀರ್ಘ ೧೧೫ ವರ್ಷಗಳನ್ನು ಪೂರೈಸಿದೆ. ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಬ್ಯಾಂಕ್‌ನ ನಿಯಮಾನುಸಾರ ಎಲ್ಲಾ ಯೋಜನೆಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಗ್ರಾಹಕರ ಸಹಕಾರದಿಂದ ಬ್ಯಾಂಕ್ ಯಶಸ್ಸಿನ ದಿಕ್ಕಿನತ್ತ ಸಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಾಲಮೇಳದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದರು.
ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಎಂ.ಯು.ಮುತ್ತಪ್ಪ ಹಾಗೂ ಹಿರಿಯ ಗ್ರಾಹಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಶೈಕ್ಷಣಿಕ, ಗೃಹ, ವ್ಯಾಪಾರ, ಮುದ್ರ ಸೇರಿದಂತೆ ವಿವಿಧ ಯೋಜನೆಗಳ ಸಾಲದ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ನೆರೆದಿದ್ದ ೭೫ ಕ್ಕೂ ಹೆಚ್ಚು ಗ್ರಾಹಕರಿಗೆ ವಿವಿಧ ಬಗೆಯ ಸಸಿಗಳನ್ನು ಹಂಚುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.