ಜಿಲ್ಲೆ

ಬ್ಯಾಂಕ್​ ಮ್ಯಾನೇಜರ್​ ವರ್ಗಾವಣೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​ : ಕನ್ನಡ ಮಾತನಾಡುವುದಿಲ್ಲ ಎಂದು ಧಿಮಾಕು ತೋರಿದ ರಾಷ್ಟ್ರೀಕೃತ ಬ್ಯಾಂಕಿನ ಬ್ರಾಂಚ್​ ಮ್ಯಾನೇಜರ್​ ಎತ್ತಂಗಡಿಯಾಗಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕು ಎಂಬ ಕನ್ನಡಪರ ಹೋರಾಟಗಾರನ ಒತ್ತಾಯಕ್ಕೆ ವಿರೋಧ ವ್ಯಕ್ತಪಡಿಸಿ, ಇದು ಭಾರತ. ಕನ್ನಡ ಮಾತನಾಡುವುದಿಲ್ಲ ಎಂದು ಪಟ್ಟುಹಿಡಿದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಬ್ಯಾಂಕ್​ ಈ ಕ್ರಮಕೈಗೊಂಡಿದೆ ಎನ್ನಲಾಗಿದೆ. ಕನ್ನಡ ಭಾಷೆಗೆ ಅಪಮಾನ ಮಾಡಿದ ಬ್ಯಾಂಕ್​ ಮ್ಯಾನೇಜರ್​ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಚಂದಾಪುರದಲ್ಲಿ ಕನ್ನಡಪರ ಸಂಟನೆಗಳು ಬಲ ಪ್ರದರ್ಶಿಸಿವೆ.

ಏನಿದು ಪ್ರಕರಣ?: ಚಂದಾಪುರದ ಬ್ಯಾಂಕ್​ ಶಾಖೆ ವ್ಯವಸ್ಥಾಪಕಿ ಹಾಗೂ ಕೆಆರ್​ಎಸ್​ ಪಕ್ಷದ ಮಹೇಶ್​ ನಡುವೆ ಕನ್ನಡ ಮಾತಾಡುವ ವಿಚಾರಕ್ಕೆ ಇತ್ತೀಚೆಗೆ ಗಲಾಟೆ ನಡೆದಿದೆ. ಮಹೇಶ್​ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಯಾವುದೇ ಕಾರಣಕ್ಕೂ ಕನ್ನಡ ಮಾತನಾಡುವುದಿಲ್ಲ. ಹಿಂದಿಯಲ್ಲಿ ಮಾತನಾಡುತ್ತೇನೆ ಎಂದು ವ್ಯವಸ್ಥಾಪಕಿ ಧಿಮಾಕು ತೋರಿಸಿದ್ದರು. ಮಹೇಶ್​ ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಿದ್ದಂತೆ ಕನ್ನಡಪರ ಸಂಟನೆಗಳು ಕೆರಳಿದ್ದವು.

ಮುಖ್ಯಮಂತ್ರಿ ಖಂಡನೆ : ರಾಷ್ಟ್ರೀಕೃತ ಬ್ಯಾಂಕ್​ ಮ್ಯಾನೇಜರ್​ ಕನ್ನಡ ಮಾತನಾಡಲು ನಿರಾಕರಿಸುವುದನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ. ಈ ಸಂಬಂಧ ಎಕ್ಸ್​ಪೋಸ್ಟ್​ ಮಾಡಿರುವ ಸಿಎಂ, ಮ್ಯಾನೇಜರ್​ ನಡವಳಿಕೆ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಿರುವ ಕ್ರಮ ಮೆಚ್ಚುವಂಥದ್ದು, ಈ ಮೂಲಕ ವಿವಾದಕ್ಕೆ ತೆರೆಬಿದ್ದಿದೆ ಎಂದಿದ್ದಾರೆ.

ಅಮಾನತಿಗೆ ಒತ್ತಾಯ : ಪ್ರತಿಭಟನೆ ಜೋರಾಗುತ್ತಿದ್ದಂತೆ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದರು. ಈ ವೇಳೆ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ರಸ್ತೆಯಲ್ಲಿಯೇ ಹೊರಳಾಡಿ ಕನ್ನಡಕ್ಕೆ ಅಪಮಾನ ಮಾಡಿದ ಮ್ಯಾನೇಜರ್​ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ಅಂತೆಯೇ, ಚಂದಾಪುರದ ಶಾಖೆ ಮುಂಭಾಗ ಕರವೇ ನಾರಾಯಣಗೌಡ ಮತ್ತು ಶಿವರಾಮೇಗೌಡ ಬಣದಿಂದ ಪ್ರತಿಭಟನೆ ನಡೆಸಲಾಯಿತು. ಕನ್ನಡಪರ ಸಂಟನೆಗಳ ಕಾರ್ಯಕರ್ತೆಯರು ಸೇರಿ ಹೋರಾಟಗಾರರು ಬ್ಯಾಂಕ್​ ಒಳಗೆ ನುಗ್ಗಿ ಬ್ಯಾಂಕ್​ ಮ್ಯಾನೇಜರ್​ ವಿರುದ್ಧ ಆಕ್ರೋಶ ಹೊರಹಾಕಿದರು. ಮುಂದಿನ ದಿನಗಳಲ್ಲಿ ಬ್ಯಾಂಕ್​ಗಳಲ್ಲಿರುವ ಹಿಂದಿ ಭಾಷಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಕನ್ನಡ ಬರದೆ ಇದ್ದರೆ ಕಲಿತು ಮಾತನಾಡಬೇಕು. ಇಲ್ಲವಾದರೆ ಅವರ ರಾಜ್ಯಕ್ಕೆ ಹೋಗಿ ಕೆಲಸ ಮಾಡಿಕೊಳ್ಳಲಿ. ಕರ್ನಾಟಕದಲ್ಲಿ ಇದ್ದು ಇಲ್ಲಿನ ಕನ್ನಡಕ್ಕೆ ಅಪಮಾನ ಮಾಡಿದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಕನ್ನಡ ಪರ ಸಂಟನೆ ಮುಖಂಡರು ಎಚ್ಚರಿಕೆ ನೀಡಿದರು.

ಪ್ರತಿಭಟನೆ ಕಾವು : ಮ್ಯಾನೇಜರ್​ ವಿರುದ್ಧ ಕರವೇ ನಾರಾಯಣಗೌಡ ಬಣದ ಹೋರಾಟಗಾರರು ಬೆಂಗಳೂರಿನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ತಿಂಗಳ ಸಮಯವಕಾಶ ಕೊಡುತ್ತೇವೆ. ಎಲ್ಲ ಮ್ಯಾನೇಜರ್​ಗಳು ಕನ್ನಡ ಕಲಿತು ಕನ್ನಡದಲ್ಲೇ ವ್ಯವಹರಿಸಬೇಕು. ಇಲ್ಲದಿದ್ದರೆ ಎಲ್ಲ ಬ್ರಾ$್ಯಂಚ್​ಗೂ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.