ಜಿಲ್ಲೆ

ಬ್ಯಾಂಕ್ ಖಾಸಗೀಕರಣ ಬೇಡ ; ರಾಷ್ಟ್ರವ್ಯಾಪಿ ಬಂದ್ ಹಿನ್ನೆಲೆಯಲ್ಲಿ ತುಮಕೂರಿನಲ್ಲೂ ಹೋರಾಟ

Tumakuru

ತುಮಕೂರು : ಬ್ಯಾಂಕ್‌ಗಳ ಖಾಸಗೀಕರಣ ಪ್ರಸ್ತಾವನೆ ವಿರೋಧಿಸಿ ಎರಡು ದಿನಗಳ ರಾಷ್ಟ್ರವ್ಯಾಪಿ ಬಂದ್ ಹಿನ್ನೆಲೆಯಲ್ಲಿ ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆ-ಕರ್ನಾಟಕ ಹಾಗೂ ಯುನೈಟೆಡ್ ಫೋರಂ ಆಫ್ ಯೂನಿಯನ್ (ಯುಎಫ್‌ಬಿಯು) ವತಿಯಿಂದ ನಗರದ ಎಸ್‌ಬಿಐ ಪ್ರಧಾನ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಸ್ವಾತಂತ್ರೃಚೌಕದ ಬಳಿಕ ಎಸ್‌ಬಿಐ ಪ್ರಧಾನ ಕಚೇರಿ ಮುಂಭಾಗ ಸಮಾವೇಶಗೊಂಡ ನೂರಾರು ಬ್ಯಾಂಕ್ ನೌಕರರು, ಕೇಂದ್ರ ಸರ್ಕಾರದ ಖಾಸಗೀಕರಣ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿಚಾರವನ್ನು ಕೈ ಬಿಡುವಂತೆ ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಯುಎಫ್‌ಬಿಯು ಜಿಲ್ಲಾ ಸಂಚಾಲಕ ವಾದಿರಾಜ್, ಕೇಂದ್ರ ಸರ್ಕಾರದ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ಮಾಡುವ ಹುನ್ನಾರ ಖಂಡಿಸಿ ಗುರುವಾರ ಮತ್ತು ಶುಕ್ರವಾರ ದೇಶದಾದ್ಯಂತ ಸುಮಾರು 10 ಲಕ್ಷ ಬ್ಯಾಂಕ್ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

1969 ರಲ್ಲಿ ಅಂದಿನ ಸರ್ಕಾರ 14 ಬ್ಯಾಂಕ್‌ಗಳನ್ನು ಹಾಗೂ 1980ರಲ್ಲಿ 6 ವಾಣಿಜ್ಯ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದವು. 1947-1969ರ ಅವಧಿಯಲ್ಲಿ 550 ಖಾಸಗಿ ಬ್ಯಾಂಕ್‌ಗಳು ದಿವಾಳಿಯಾಗಿದ್ದವು. 1969 ರ ನಂತರವೂ ಕೂಡಾ 38 ಖಾಸಗಿ ಬ್ಯಾಂಕ್‌ಗಳು ದಿವಾಳಿಯಾಗಿದ್ದವು. ಗ್ರಾಹಕರಿಗೆ ಸಮರ್ಪಕವಾಗಿ ಸೌಲಭ್ಯ ಒದಗಿಸುವ ಸದುದ್ದೇಶದಿಂದ ಅಂದಿನ ಕೇಂದ್ರ ಸರ್ಕಾರ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿತ್ತು. ಆದರೆ ಈಗ ಕೆಲವೇ ಬಂಡವಾಳ ಶಾಹಿಗಳಿಗೆ ಹಿತಕ್ಕಾಗಿ ರಾಷ್ಟ್ರೀಯಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ನಮ್ಮ ವಿರೋಧವಿದೆ. ಇದಕ್ಕೆ ನಾವುಗಳು ಅವಕಾಶ ನೀಡುವುದಿಲ್ಲ. ಬಂಡವಾಳ ಶಾಹಿಗಳಿಗೆ ಬ್ಯಾಂಕ್‌ಗಳನ್ನು ನೀಡಿದರೆ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2008ರಲ್ಲಿ ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆ ಕುಸಿತದ ಸಂದರ್ಭದಲ್ಲೂ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸದೃಢವಾಗಿತ್ತು. ಇದಕ್ಕೆ ರಾಷ್ಟ್ರೀಕರಣವೇ ಪ್ರಮುಖ ಕಾರಣ. ಬ್ಯಾಂಕ್‌ಗಳ ಖಾಸಗೀಕರಣದಿಂದ ಬಂಡವಾಳ ಶಾಹಿಗಳಾದ ನೀರವ್ ಮೋದಿ, ವಿಜಯಮಲ್ಯ ಅಂತವರು ಕೋಟಿ ಕೋಟಿ ಸಾಲ ಪಡೆದು ಸಾಲ ಮರುಪಾವತಿಸದೆ ವಿದೇಶಗಳಿಗೆ ತೆರಳಿ ವಂಚಿಸುವ ಕೆಲಸ ಮಾಡುತ್ತಾರೆ. ಇದರಿಂದ ಪ್ರಾಮಾಣಿಕ ಗ್ರಾಹಕರ ಭದ್ರತೆಗೆ ಧಕ್ಕೆ ಉಂಟಾಗಲಿದೆ ಎಂದು ಎಚ್ಚರಿಸಿದರು.

ನಿರ್ಧಾರದಿಂದ ಹಿಂದೆ ಸರಿಯಲಿ: ಖಾಸಗೀಕರಣ ಯೋಚನೆಯಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು. ಅಲ್ಲಿಯವರೆಗೂ ಹೋರಾಟ ನಡೆಸಲಾಗುವುದು. ಕರೊನಾ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿ ಕರೊನಾ ಸೇನಾನಿಗಳಾಗಿ ಕೆಲಸ ಮಾಡಿದ್ದಾರೆ. ಇದ್ಯಾವುದನ್ನು ಪರಿಗಣಿಸದೆ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು ಎಂದು ಯುಎಫ್‌ಬಿಯು ಜಿಲ್ಲಾ ಸಂಚಾಲಕ ವಾದಿರಾಜ್ ಆಗ್ರಹಿಸಿದರು.