ವಿಜಯಪುರ: ಶ್ರಮ ಸಂಸ್ಕೃತಿಗೆ ಹೆಸರಾಗಿರುವ ಬಂಜಾರಾ ಸಮುದಾಯದ ಜನ ನೆರೆಯ ಮಹಾರಾಷ್ಟ್ರ ಮತ್ತು ಗೋವಾಕ್ಕೆ ಗುಳೆ ಹೋಗಿದ್ದು, ಕೂಡಲೇ ರಾಜ್ಯಕ್ಕೆ ಆಗಮಿಸಿ ಜಾತಿ ಗಣತಿಯಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ಬಂಜಾರಾ ರಾಜಕೀಯ ಧುರೀಣರು ಒಕ್ಕೋರಲಿನಿಂದ ಕರೆ ನೀಡಿದರು.
ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ ತಾಂಡಾ-1ರಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ದುರ್ಗಾದೇವಿ ಜಾತ್ರೋತ್ಸವದಲ್ಲಿ ಮಾತನಾಡಿದ ನಾಯಕರುಗಳು, ಬಂಜಾರಾ ಸಮುದಾಯ ವಿಶಿಷ್ಟ ಹಾಗೂ ವಿಭಿನ್ನ ಸಂಸ್ಕೃತಿಗೆ ಹೆಸರಾಗಿದೆ. ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಏಳ್ಗೆ ಸಾಧಿಸಲು ಸರ್ಕಾರದ ಜಾತಿಗಣತಿಯಲ್ಲಿ ತಪ್ಪದೇ ಪಾಲ್ಗೊಳ್ಳಬೇಕೆಂದರು.
ಮಾಜಿ ಸಂಸದ ಉಮೇಶ ಜಾಧವ ಮಾತನಾಡಿ, ಬಂಜಾರಾ ಸಮುದಾಯ ದೇಶದೆಲ್ಲೆಡೆ ವಾಸವಾಗಿದ್ದು, ತನ್ನದೇ ಸಂಸ್ಕೃತಿ, ಆಚಾರ-ವಿಚಾರಗಳ ಮೂಲಕ ಗಮನ ಸೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಎಲ್ಲರ ಬಾಯಲ್ಲೂ ‘ಜೈ ಸೇವಾಲಾಲ’ ಘೋಷಣೆ ಮೊಳಗುತ್ತಿದೆ. ಕರ್ನಾಟಕ, ತೆಲಂಗಾಣದಲ್ಲಿ ಬಂಜಾರಾ ಸಮುದಾಯಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಸಮುದಾಯಕ್ಕೆ ಎರಡು ಸ್ಥಾನಗಳನ್ನು ನೀಡಲಾಗಿದೆ. ಅದೇ ರೀತಿ ಎಲ್ಲ ರಾಜ್ಯಗಳಲ್ಲಿ ಬಂಜಾರಾ ಸಮುದಾಯಕ್ಕೆ ಆದ್ಯತೆ ಸಿಗಬೇಕೆಂದರು.
ಕರ್ನಾಟಕದಲ್ಲಿನ ಬಂಜಾರಾ ಸಮುದಾಯದವರು ಗೋವಾದಲ್ಲಿ ನೆಲೆಸಿದ್ದಾರೆ. ಅವರು ಕರ್ನಾಟಕಕ್ಕೆ ಬಂದು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯಕ ಮಾತನಾಡಿ, ರಾಜ್ಯದಲ್ಲಿ ಬಂಜಾರಾ ಸಮುದಾಯದ 40 ಲಕ್ಷ ಜನಸಂಖ್ಯೆ ಇದೆ. ವಿಜಯಪುರ ಜಿಲ್ಲೆಯೊಂದರಲ್ಲಿಯೇ 500 ತಾಂಡಾಗಳು ಇವೆ. ಹೀಗಾಗಿ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಸೊರಗೊಂಡನಕೊಪ್ಪದಲ್ಲಿ 20 ಕೋಟಿ ರೂ., ಶಾಲೆಗೆ 50 ಕೋಟಿ ರೂ.ಗಳನ್ನು ಸರ್ಕಾರ ನೀಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ. ಪಾಟೀಲರು ವಿಶೇಷ ಕಾಳಜಿ ಹೊಂದಿದ್ದಾರೆ. ಸೋಮದೇವರಹಟ್ಟಿ ತಾಂಡಾದ ದುರ್ಗಾದೇವಿ ಜಾತ್ರೆಗೆ 10 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಮಹಾರಾಷ್ಟ್ರದ ಜಲ ಸಂರಕ್ಷಣೆ ಸಚಿವ ಸಂಜಯ ರಾಠೋಡ್ ಮಾತನಾಡಿ, ಬಂಜಾರಾ ಸಮುದಾಯವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಬೇರೆ ಬೇರೆ ಪ್ರವರ್ಗಗಳಲ್ಲಿಯೂ ಸೇರ್ಪಡೆ ಮಾಡಲಾಗಿದೆ. ಮಹಾರಾಷ್ಟದಲ್ಲಿಯೂ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಿದೆ. ಅಲ್ಲದೇ, ಕೇಂದ್ರ ಸರ್ಕಾರದಿಂದ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಪ್ರತ್ಯೇಕ ಸಚಿವಾಲಯದ ಬೇಡಿಕೆ ಮಂಡಿಸಬೇಕಿದೆ ತಾಂಡಾ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ ಬಗ್ಗೆ ಚಿಂತಿಸಬೇಕು. ಬಿಜೆಪಿ, ಕಾಂಗ್ರೆಸ್ ಹಾಗೂ ಶಿವಸೇನೆ ಸೇರಿ ಯಾವುದೇ ಪಕ್ಷದಲ್ಲಿ ಸಮುದಾಯದ ನಾಯಕರೂ ಇದ್ದರೂ, ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದರು.
ಅಲ್ಲದೇ, ಪೌರಾದೇವಿ ಕ್ಷೇತ್ರಕ್ಕೆ ಮಹಾರಾಷ್ಟ್ರ ಸರ್ಕಾರದ 750 ಕೋಟಿ ರೂ. ಅನುದಾನ ನೀಡಿದೆ. ಈ ಕ್ಷೇತ್ರಕ್ಕೆ ವೈಭವಶಾಲಿ ಇತಿಹಾಸ ಇದೆ. ಬರುವ ದಿನಗಳಲ್ಲಿ ಪೌರಾದೇವಿ ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿಗೊಳ್ಳಲಿದೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ದುರ್ಗಾದೇವಿ ಆಶೀರ್ವಾದ ತಮ್ಮ ಮೇಲಿದೆ. ದೇವಸ್ಥಾನದ ಧರ್ಮಾಧಿಕಾರಿಗಳು ಹೇಳಿದ ಕಾರ್ಯಗಳೆಲ್ಲವನ್ನೂ ತಪ್ಪದೇ ಮಾಡಿದ್ದೇನೆ. ಮುಂದೆಯೂ ಅಭಿವೃದ್ಧಿಗೆ ಬದ್ಧ ಎಂದರು.
ರತ್ನಗಿರಿ ಶಾಸಕ ಕಿರಣ ಸವಾಂತ, ಕೆಪಿಎಸ್‌ಇ ಸದಸ್ಯ ಭೋಜಾ ನಾಯಕ್ ಮಾತನಾಡಿದರು.
ಶ್ರೀ ದುರ್ಗಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಜಗನು ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಡಾ.ಬಾಬು ರಾಜೇಂದ್ರ ನಾಯಕ್ ಮತ್ತಿತರರಿದ್ದರು.