ಶಿಕಾರಿಪುರ: ಸಂತ ಸೇವಾಲಾಲ್ ಅವರು ಕಾಲ್ನಡಿಗೆಯಲ್ಲಿ ದೇಶಪರ್ಯಟನೆ ಮಾಡಿ ಹಿಂದುಳಿದ ಬಂಜಾರ ಸಮುದಾಯದ ಅಭಿವೃದ್ಧಿಗೆ ಬೆಳಕು ತೋರಿದರು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
ಶುಕ್ರವಾರ ತಾಲೂಕಿನ ಕವಾಸಪುರ ಗ್ರಾಮದಲ್ಲಿ ಬಂಜಾರ ಸಮುದಾಯ ಏರ್ಪಡಿಸಿದ್ದ ಶ್ರೀ ಸೇವಾಲಾಲ್ ಮೂರ್ತಿ ಪ್ರತಿಷ್ಠಾಪನೆ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಪ್ರಕಾಶಿಸುತ್ತಿದೆ. ನಾವು ಧರ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ ಮತ್ತು ಆಚರಣೆಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಪೂಜ್ಯ ಸಂತ ಸೇವಾಲಾಲ್ ಅವರು ತಮ್ಮ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದಂತಹ ಪವಾಡ ಪುರುಷರು ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇದ್ದಾಗ ಸಂತ ಸೇವಾಲಾಲ್‌ರ ಜನ್ಮಸ್ಥಳವಾದ ಸೂರಗೊಂಡನಕೊಪ್ಪ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಬಂಜಾರ ಸಮುದಾಯದ ರಾಮಾನಾಯ್ಕ ಅವರಿಗೆ ಮಾಹಿತಿ ಹಕ್ಕು ಆಯೋಗದ ಉನ್ನತ ಸ್ಥಾನ ನೀಡಿದ್ದರು. ಸಮಾಜದವರಿಗೆ ಸಚಿವ ಸ್ಥಾನ ನೀಡಿದ್ದಲ್ಲದೇ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಬಂಜಾರ ಸಮುದಾಯವು ಅತ್ಯಂತ ಸ್ವಾಭಿಮಾನಿ ಹಾಗೂ ಪರಿಶ್ರಮಿ ಸಮಾಜ ಎಂದು ಹೇಳಿದರು.
ನಾಗವಂದದ ಶ್ರೀ ಶಿವಯೋಗಿ ಶಿವಾನಂದ ಶಿವಾಚಾರ್ಯರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಗುರುಗಳಾದ ಶ್ರೀ ಸೈನಾ ಭಗತ್ ಮಹಾರಾಜ್, ತಾಪಂ ಮಾಜಿ ಅಧ್ಯಕ್ಷ ಸುರೇಶ್ ನಾಯ್ಕ, ವಕೀಲ ರಾಮಾನಾಯ್ಕ ಇತರರಿದ್ದರು.