ಜಿಲ್ಲೆ

ಬಂಜಾರರ ಮೇಲಿನ ದಾಳಿ ಸಹಿಸೊಲ್ಲ

Shivamogga

ಸೊರಬ: ಮತಾಂತರಿಗಳು ಹಣ, ಆಮಿಷ ಮತ್ತು ಭ್ರಮೆಗಳನ್ನು ತುಂಬುವ ಮೂಲಕ ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಬಂಜಾರ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿ ಸಹಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಕುಡಚಿ ಹೇಳಿದರು.

ತಾಲೂಕಿನ ಹಿರೇಮಾಗಡಿ ತಾಂಡಾದಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಸೊಮವಾರ ಹಮ್ಮಿಕೊಂಡಿದ್ದ ಬಲವಂತದ ಮತಾಂತರ ತಡೆಯುವ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀಮಂತ ಸಂಸ್ಕೃತಿ ಹೊಂದಿರುವ ಬಂಜಾರ ಸಮುದಾಯವನ್ನು ಮತಾಂತರಿಸಲು ಯತ್ನಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ವಧರ್ಮ ಸಹಿಷ್ಣುತೆಯ ದೇಶದಲ್ಲಿ ಎಲ್ಲ ಧರ್ಮವನ್ನು ಗೌರವಿಸುತ್ತೇವೆ. ಆದರೆ ಒಂದು ಸಮಾಜದವರನ್ನು ಬಲವಂತವಾಗಿ ಮತಾಂತರ ಮಾಡುವುದು ಹಾಗೂ ಭಾವನಾತ್ಮಕವಾಗಿ ಸುಳ್ಳು ಸುದ್ದಿ ಹಬ್ಬಿಸುವುದು ಅಪರಾಧ. ಗ್ರಾಮೀಣ ಭಾಗದಲ್ಲಿ ಮತಾಂತರಕ್ಕೆ ಮುಂದಾಗುವವರನ್ನು ಸೆರೆಹಿಡಿದು ಪೊಲೀಸ್ ವಶಕ್ಕೆ ನೀಡುವಂತೆ ಸಲಹೆ ನೀಡಿದರು.

ಒಮ್ಮೆ ಮತಾಂತರಗೊಂಡ ವ್ಯಕ್ತಿ ಹಾಗೂ ಕುಟುಂಬಕ್ಕೆ ಸರ್ಕಾರದ ಸೌಲಭ್ಯ ಸಿಗದಂತೆ ಕಡಿವಾಣ ಹಾಕಬೇಕು. ಅವರ ಜಾತಿ ಪ್ರಮಾಣ ರದ್ದುಪಡಿಸುವ ಜವಾಬ್ದಾರಿ ಸಂಬಂಧಿಸಿದ ಇಲಾಖೆ ಮೇಲಿದೆ. ಮತಾಂತರಕ್ಕೆ ಪ್ರಚೋದನೆ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

600 ಕುಟುಂಬಗಳಿರುವ ತಾಂಡಾಗಳಲ್ಲಿ ನರೇಗಾದಡಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿಗಳು ನಡೆಯಬೇಕು. ಉದ್ಯೋಗ ಖಾತ್ರಿ ಯೋಜನೆ ನೋಂದಾಯಿತರ ಬಳಿ ಕಾರ್ಡ್ ಇರಬೇಕು. ಕಡ್ಡಾಯವಾಗಿ ಫಲಾನುಭವಿಯ ಬಳಿಯೇ ಕಾರ್ಡ್ ಇರುವಂತೆ ಎಚ್ಚರ ವಹಿಸುವುದು ಹಾಗೂ ಹೊಸದಾಗಿ ಜಾಬ್ ಕಾರ್ಡ್​ಗಳನ್ನು ನೀಡುವುದು ಪಿಡಿಒಗಳ ಹೊಣೆ ಎಂದರು.

ಹಿರೇಮಾಗಡಿ ತಾಂಡಾ ಅಭಿವೃದ್ಧಿಗಾಗಿ ಸ್ಥಳದಲ್ಲೇ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದರು.

ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಬಿ.ಡಿ.ರವಿ, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಸವಿತಾ ಶಿವಕುಮಾರ್, ತಹಸೀಲ್ದಾರ್ ನಫೀಸಾ ಬೇಗಂ, ತಾಪಂ ಸಹಾಯಕ ನಿರ್ದೇಶಕ ದಿನೇಶ್, ಸಮಾಜ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಕೆ.ಎನ್.ಪ್ರವೀಣ್, ಸಿಪಿಐ ಆರ್.ಡಿ.ಮರುಳಸಿದ್ದಪ್ಪ, ಪಿಎಸ್​ಐ ಅರವಿಂದ್, ಹಿರೇಮಾಗಡಿ ತಾಂಡಾ ಹಟ್ಟಿನಾಯಕ ತುಟ್ಯಾನಾಯ್್ಕ ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಧರ್ವನಾಯ್್ಕ ಇತರರಿದ್ದರು.