ಜಿ.ನಾಗರಾಜ್ ಬೂದಿಕೋಟೆ
ತಾಲೂಕಿನ ಗಡಿಭಾಗದ ಬಹುತೇಕ ರಸ್ತೆಗಳು ಹಾಳಾಗಿ, ಕಲ್ಲು ಹಾಗೂ ಗುಂಡಿಗಳಿಂದ ಕೂಡಿದ್ದು, ಇಂತಹ ರಸ್ತೆಗಳಲ್ಲಿನ ಸಂಚಾರ ಜನರನ್ನು ಹೈರಾಣಾಗಿಸಿದೆ.
ಆಂಧ್ರ ಮತ್ತು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ತಾಲೂಕಿನ ಜನರಿಗೆ ಈ ರಸ್ತೆಯೇ ಪ್ರಮುಖವಾಗಿದ್ದು, ಸಂಪೂರ್ಣ ಅಧ್ವಾನಗೊಂಡಿದೆ.
ಈ ಭಾಗದ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಬಿಸಿಲು ಬಂದರೆ ಧೂಳು, ಮಳೆ ಬಂದರೆ ಕೆಸರಿನ ಗದ್ದೆಗಳಾಗಿ ಮಾರ್ಪಡುತ್ತವೆ. ಹದಗೆಟ್ಟ ರಸ್ತೆಗಳಿಂದ ಆಗಾಗ ಅಪಘಾತ ಸಂಭವಿಸುವುದು ಸಾಮಾನ್ಯವಾಗಿದ್ದು, ಹಲವರು ಗಾಯಗೊಂಡರೆ, ಕೆಲವರ ಪ್ರಾಣಕ್ಕೂ ಕಂಟಕವಾಗಿವೆ.
ಡಾಂಬರ್ ಹಾಕಿದ ರಸ್ತೆಗಳಲ್ಲೇ ಕಾಮಗಾರಿ ನಡೆಸಿದ ಕೆಲವೇ ತಿಂಗಳಲ್ಲಿ ಡಾಂಬರ್ ಕಿತ್ತು ಹೋಗಿ ಜಲ್ಲಿಕಲ್ಲು ಹೊರಬರುತ್ತಿದೆ. ಅಲ್ಪ ಪ್ರಮಾಣದ ಮಳೆ ಬಿದ್ದರೂ ಗುಂಡಿಗಳು ನಿಮಾರ್ಣವಾಗುತ್ತಿವೆ. ಕಲ್ಲುಗಳಿಂದ ಕೂಡಿದ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಹಿಂದೆ ಬರುವಂತಹ ವಾಹನ ಸವಾರರಿಗೆ ಕಲ್ಲುಗಳು ತಾಗಿ ಗಾಯಗೊಂಡಿರುವ ಸಾಕಷ್ಟು ನಿದರ್ಶನಗಳಿವೆ.
ಕಾಮಸಮುದ್ರದಿಂದ ತೋಪ್ಪನಹಳ್ಳಿ ಮಾರ್ಗದ ರಸ್ತೆಯೂ ಅಲ್ಲಲ್ಲಿ ಹಾಳಾಗಿದೆ. ಹೆಚ್ಚಿನ ಸಂಖ್ಯೆಯ ವಾಹನಗಳು ಓಡಾಡುವ ಈ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ನರಕಯಾತನೆ ಅನುಭವಿಸುವ ಸ್ಥಿತಿ ಇದೆ. ಕಳವಂಚಿ ಗ್ರಾಮದ ಮುಖ್ಯ ಮಾರ್ಗದಲ್ಲಿ ಬೃಹತ್ ಗುಂಡಿಗಳು ನಿಮಾರ್ಣವಾಗಿದೆ. ಮಳೆ ಬಂದರೆ ಈಜು ಕೊಳಗಳಾಗುತ್ತವೆ. ಜತೆಗೆ ಚರಂಡಿ ನಿಮಾರ್ಣ ಮಾಡದ ಕಾರಣ ರಸ್ತೆಗೆ ಕೊಳಚೆ ನೀರು ಹರಿದು ಬರುತ್ತಿದ್ದು, ವಾಹನ ಸವಾರರು ಹರಸಾಹಸ ಪಡಬೇಕಿದೆ. ಹದಗೆಟ್ಟ ರಸ್ತೆಗಳಿಗೆ ಮೋಕ್ಷ ಕಲ್ಪಿಸಲು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಬದಲಾವಣೆಯಾಗಿಲ್ಲ.
ರಸ್ತೆ ದುರಸ್ತಿಗೆ ಸಾರ್ವಜನಿಕರ ಒತ್ತಾಯ
ತಾಲೂಕಿನ ಮುಖ್ಯ ರಸ್ತೆಗಳ ಸ್ಥಿತಿಯೇ ಹೀಗಿದ್ದರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳ ಸ್ಥಿತಿ ಬಣ್ಣಿಸಲಾಗದು. ತಾಲೂಕಿನ ದವಡಬೆಟ್ಟ ಗ್ರಾಮದ ಬಳಿ ರಸ್ತೆ ಬಾವಿಗೆ ಕುಸಿದಿದ್ದು, ಆ ಗ್ರಾಮದ ಜನತೆ ಕಳೆದ ಎರಡು ವರ್ಷಗಳಿಂದ ಕೆರೆ ಕಟ್ಟೆ ಮೇಲಿಂದ ಅಪಾಯಕಾರಿ ಸ್ಥಿತಿಯಲ್ಲಿ ಓಡಾಡುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆಗಳ ಅಭಿವೃದ್ಧಿಗೆ ಒತ್ತುಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
"ತಾಲೂಕಿನ ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಮಳೆ ಬಂದರೆ ರಸ್ತೆಗಳು ಕೆಸರುಗದ್ದೆಗಳಾಗಿ, ಶಾಲಾ&ಕಾಲೇಜುಗಳಿಗೆ ಮಕ್ಕಳು ಸಂಚರಿಸಲು ಸಮಸ್ಯೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಬೇಕು."
- ಸೋಮಶೇಖರರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ
"ಬಂಗಾರಪೇಟೆ ಕಾಮಸಮುದ್ರ ಮಾರ್ಗದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ತಾಲೂಕಿನ ಕೆಲವು ರಸ್ತೆಗಳ ಅಭಿವೃದ್ಧಿಗೆ ಅನುದಾನಕ್ಕೆ ಬೇಡಿಕೆ ಇಡಲಾಗಿದ್ದು, ಅನುದಾನ ಬಂದ ಕೂಡಲೇ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತದೆ."
- ರವಿಕುಮಾರ್, ಎಇಇ ಲೋಕೋಪಯೋಗಿ ಇಲಾಖೆ