ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಿಎಂ ಎಸ್.ಬಂಗಾರಪ್ಪ ಬಂಗಾರಪ್ಪ ಅವರ ಭಾವಚಿತ್ರಕ್ಕೆ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಪುಷ್ಪನಮನ ಸಲ್ಲಿಸಿದರು. ಸಿ.ಎಸ್.ಚಂದ್ರಭೂಪಾಲ್, ಕಲೀಂಪಾಶಾ, ಇಕ್ಕೇರಿ ರಮೇಶ್, ಗಾಡಿಕೊಪ್ಪ ರಾಜಣ್ಣ, ಮೋಹನ್, ಚಂದ್ರಶೇಖರ್, ಬಲ್ಕಿಷ್‌ಬಾನು, ವಿಜಯಲಕ್ಷ್ಮೀ ಪಾಟೀಲ್, ಸ್ಟೆಲ್ಲಾ ಮಾರ್ಟಿನ್ ಇದ್ದರು.  
ಜಿಲ್ಲೆ

ರಾಜಕಾರಣದ ಆಗಸದಲ್ಲಿ ಬಂಗಾರಪ್ಪ ಮರೆಯಲಾಗದ ಧ್ರುವತಾರೆ

ಶಿವಮೊಗ್ಗ: ರಾಜಕಾರಣ ಎಂಬ ಆಗಸದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮರೆಯಲಾಗದ ಧ್ರುವತಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಬಣ್ಣಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ 90ನೇ ಜನ್ಮದಿನದ ಅಂಗವಾಗಿ ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಬಂಗಾರಪ್ಪ ಅವರು ಹಿಂದುಳಿದ ವರ್ಗದವರ ನೇತಾರರಾಗಿದ್ದರು. ಬಡವರ ಪಾಲಿನ ಆಶ್ರಯದಾತ ಎಂದರು.
ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ಶೋಷಿತರ ಪರವಾಗಿ ನಿಂತವರು. ನಿಷ್ಠೂರವಾದಿಯಾಗಿದ್ದರೂ ಇಷ್ಟವಾಗುತ್ತಿದ್ದರು. ಹಲವು ಪಕ್ಷಗಳಲ್ಲಿ ಕಾಣಿಸಿಕೊಂಡರೂ ಕಾಂಗ್ರೆಸ್ ಅವರ ತವರುಮನೆಯಾಗಿತ್ತು. ಕೇವಲ ರಾಜಕಾರಣಿಯಾಗಿರದೆ ಸಾಂಸ್ಕೃತಿಕ ರಾಯಭಾರಿಯೂ ಆಗಿದ್ದರು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದರು.
ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿದ್ದ ಅವರು, ಶಿವಮೊಗ್ಗದ ಅಭಿವೃದ್ಧಿಗಾಗಿ ಶ್ರಮಿಸಿದವರು. ಗ್ರಾಮೀಣ ಕೃಪಾಂಕ ನೀಡುವ ಮೂಲಕ ಗಮನ ಸೆಳೆದವರು. ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ಯೋಜನೆಯನ್ನು ಜನರಿಗೆ ಮುಟ್ಟಿಸುವ ಮೂಲಕ ಅವರ ಆಶಯಗಳನ್ನು ಈಡೇರಿಸಬೇಕು ಎಂದರು.
ಪ್ರಮುಖರಾದ ಸಿ.ಎಸ್.ಚಂದ್ರಭೂಪಾಲ್, ಕಲೀಂಪಾಶಾ, ಇಕ್ಕೇರಿ ರಮೇಶ್, ಗಾಡಿಕೊಪ್ಪ ರಾಜಣ್ಣ, ಮೋಹನ್, ಚಂದ್ರಶೇಖರ್, ಬಲ್ಕಿಷ್‌ಬಾನು, ವಿಜಯಲಕ್ಷ್ಮೀ ಪಾಟೀಲ್, ಸ್ಟೆಲ್ಲಾ ಮಾರ್ಟಿನ್, ನಾಜೀಮಾ, ಪ್ರೇಮಾ ಎನ್. ಶೆಟ್ಟಿ, ಗಂಗಾಧರ್, ಶಮೀಮ್ ಬಾನು, ಸಂಧ್ಯಾ, ಶೋಭಾ, ಕವಿತಾ, ಸುವರ್ಣಾ ನಾಗರಾಜ್, ಚಂದ್ರಕಲಾ, ಮಧು ಸೇರಿದಂತೆ ಹಲವರು ಉಪಸ್ಥಿತರಿದ್ದರು.