ಜಿಲ್ಲೆ

ಮೊಟ್ಟೆ ಖರೀದಿ ದರ ಹೆಚ್ಚಳ, ಪಿಯು ವಿದ್ಯಾರ್ಥಿಗಳಿಗೂ ಬಿಸಿಯೂಟ?

ಕೋಲಾರ ಡೆಸ್ಕ್

ಎಂಎಲ್ಸಿ ಅನಿಲ್‌ಕುಮಾರ್ ಪ್ರಶ್ನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ

ಕೋಲಾರ: ಅಡುಗೆ ಸಹಾಯಕರು ಮತ್ತು ಆಶಾ ಕಾರ್ಯಕರ್ತರ ಬೇಡಿಕೆಯಂತೆ ಸರ್ಕಾರ ಬಜೆಟ್‌ನಲ್ಲಿ 100 ಕೋಟಿ ರೂ. ಹೆಚ್ಚಿಸಿದೆ. ಕೋಳಿ ಮೊಟ್ಟೆ ಖರೀದಿ ದರ ಹೆಚ್ಚಿಗೆ ಮಾಡುವುದು, ಪಿಯು ವಿದ್ಯಾರ್ಥಿಗಳಿಗೂ ಬಿಸಿಯೂಟ ಯೋಜನೆ ವಿಸ್ತರಿಸುವ ಬಗ್ಗೆ ಸಿಎಂ ಬಳಿ ಚರ್ಚಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿಧಾನ ಮಂಡಲ ಅಧಿವೇಶನದಲ್ಲಿ ಸೋಮವಾರ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರು ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಬಿಸಿಯೂಟ ಯೋಜನೆ ಕುರಿತು ಪ್ರಸ್ತಾಪಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೋಳಿ ಮೊಟ್ಟೆ ಖರೀದಿ ದರ 4.30 ರಿಂದ 5 ರೂ. ನೀಡುತ್ತಿದ್ದು, ಮಕ್ಕಳ ಪೌಷ್ಟಿಕತೆ ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಅಜೀಮ್‌ಪ್ರೇಮ್ ಜಿ ಫೌಂಡೇಷನ್‌ನಿಂದ ಮೊಟ್ಟೆ ನೀಡುತ್ತಿದ್ದು, ಆರ್ಥಿಕ ಇಲಾಖೆ ಮತ್ತು ಅಜೀಮ್ ಪ್ರೇಮ್ ಜಿ ಫೌಂಡೇಷನ್ ಅವರೊಂದಿಗೆ ಚರ್ಚಿಸಿ ಮೊಟ್ಟೆ ಖರೀದಿ ಮತ್ತು ಕುದಿಸಿದ ನಂತರ ಸುಲಿಯುವ ವೆಚ್ಚವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಾಹಾರ ಯೋಜನೆ ಒದಗಿಸಲು ಮುಖ್ಯಮಂತ್ರಿಗಳೊಂದಿಗೆ ಪ್ರಸ್ತಾಪಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಎಣ್ಣೆ ಮತ್ತು ಬೇಳೆ ಖರೀದಿಗೆ ಕೇಂದ್ರ ಸರ್ಕಾರದ ನಿಯಮಗಳನ್ವಯ ದರ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರ ಬೆಲೆ ಹೆಚ್ಚಳ ಮಾಡಿದರೆ ರಾಜ್ಯ ಸರ್ಕಾರವೂ ಬೆಲೆ ಹೆಚ್ಚಿಸಬೇಕಾಗುತ್ತದೆ ಎಂದರು.

ಎಂ.ಎಲ್.ಸಿ.ಅನಿಲ್‌ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಸರಿಯಾದ ಸಮಯಕ್ಕೆ ಎಣ್ಣೆ, ಬೇಳೆ ಹಾಗೂ ಇತರ ಆಹಾರ ಪದಾರ್ಥ ಸರಬರಾಜು ಮಾಡದಿರುವುದರಿಂದ ತೊಂದರೆಯಾಗುತ್ತಿದೆ. ಮೊಟ್ಟೆ ಖರೀದಿಗೆ ಮತ್ತು ಬೇಯಿಸಲು ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವೇತನದಲ್ಲಿ ಹಣ ನೀಡುತ್ತಿದ್ದಾರೆ. ಸರ್ಕಾರವು ಈ ಹಿಂದೆ ನಿಗದಿಪಡಿಸಿರುವ ದರ ಬದಲಿಸಿ ಈಗಿನ ಮಾರುಕಟ್ಟೆಯ ದರಗಳನ್ವಯ ಸರ್ಕಾರಿ ಶಾಲೆಗಳಿಗೆ ಆಹಾರ ಪದಾರ್ಥಗಳನ್ನು ಮತ್ತು ಮೊಟ್ಟೆ ಖರೀದಿಗೆ ಅನುದಾನ ನೀಡಬೇಕು ಹಾಗೂ ಅಡುಗೆ ಸಹಾಯಕರಿಗೆ ಮತ್ತು ಕಾರ್ಯಕರ್ತೆಯರಿಗೆ ಸರ್ಕಾರಿ ಕಾರ್ಮಿಕ ಕಾಯ್ದೆಯನ್ವಯ ವೇತನ ನೀಡಬೇಕು. ಸರ್ಕಾರಿ ಶಾಲೆಗಳೊಂದಿಗೆ ಜೂನಿಯರ್ ಕಾಲೇಜುಗಳಿದ್ದು, ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಹ ಮಧ್ಯಾಹ್ನದ ಉಪಾಹಾರ ಯೋಜನೆ ನೀಡಲು ಕ್ರಮವಹಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಸಚಿವರಲ್ಲಿ ಮನವಿ ಮಾಡಿದರು.