ಮುಗಳೂರಿನ ದೇಶಪಾಂಡೆ ಗುಟ್ಟಹಳ್ಳಿಯಲ್ಲಿರುವ ಹಂದಿ ಸಾಗಾಣಿಕೆ ಕೇಂದ್ರ ಜಲಾವೃತವಾಗಿದೆ. ವಿಜಯಪುರದ ಶಿಡ್ಲಘಟ್ಟ ರಸ್ತೆಯಲ್ಲಿರುವ ಸ್ಮಶಾನಗಳು ನೀರಿನಲ್ಲಿ ಮುಳುಗಡೆಯಾಗಿವೆ. 
ಜಿಲ್ಲೆ

ಹಂದಿ ಸಾಕಣೆದಾರರಿಗೆ ಗಾಯದ ಮೇಲೆ ಬರೆ: ಧಾರಾಕಾರ ಮಳೆಯಿಂದ 500ಕ್ಕೂ ಹೆಚ್ಚು ಹಂದಿಗಳು ಜಲಸಮಾಧಿ

Bengaluru Rural

ಬೆಂಗಳೂರು ಗ್ರಾಮಾಂತರ: ಒಂದು ಕಡೆ ಹಂದಿಗಳ ಸರಣಿ ಕಳವು, ಮತ್ತೊಂದೆಡೆ ಆಫ್ರಿಕನ್ ಹಂದಿ ಜ್ವರದ ಕಾಟದಿಂದ ಹೈರಾಣಾಗಿರುವ ಜಿಲ್ಲೆಯ ಹಂದಿ ಸಾಕಣೆದಾರರಿಗೆ ಧಾರಾಕಾರ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಹಂದಿ ಸಾಕಣೆ ಕೇಂದ್ರಗಳಿಗೆ ನೀರು ನುಗ್ಗಿ 500ಕ್ಕೂ ಹೆಚ್ಚು ಹಂದಿಗಳು ಮೃತಪಟ್ಟಿವೆ.


ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಭಾಗಗಳಲ್ಲಿ ಕೆಲವೊಂದು ಹಂದಿಗಳು ಮೃತಪಟ್ಟಿವೆ. ಆದರೆ ಹೊಸಕೋಟೆ ತಾಲೂಕಿನಲ್ಲಿ ಬರೋಬ್ಬರಿ 500ಕ್ಕೂ ಹೆಚ್ಚು ಹಂದಿಗಳು ನೀರು ಪಾಲಾಗಿರುವುದು ಹಂದಿ ಸಾಕಣೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ತೇಲಿ ಹೋಗುತ್ತಿವೆ ಹಂದಿ ಕಳೇಬರ: ಹೊಸಕೋಟೆಯ ಚಿಕ್ಕ ತಿರುಪತಿ ರಸ್ತೆಯಲ್ಲಿ ಮುಗಳೂರು ಜಯರಾಮರೆಡ್ಡಿ ಮತ್ತು ಸಾತನೂರು ಗಣೇಶ ಎಂಬುವರಿಗೆ ಸೇರಿದ ಹಂದಿ ಸಾಕಣೆ ಕೇಂದ್ರಕ್ಕೆ ನೀರು ನುಗ್ಗಿ ಮುನ್ನೂರಕ್ಕೂ ಹೆಚ್ಚು ಹಂದಿಗಳು ಸಾಕಣೆ ಕೇಂದ್ರದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿವೆ. ಹೊಸಕೋಟೆ ತಾಲೂಕು ಅನುಗೊಂಡಹಳ್ಳಿ ಭಾಗದಲ್ಲಿ 4 ಸಾಕಣೆ ಕೇಂದ್ರಗಳು ಸಂಪೂರ್ಣ ಜಲಾವೃತಗೊಂಡಿವೆ. ಸುಬ್ರಹ್ಮಣಿ ಎಂಬುವರ ಮಾಲೀಕತ್ವದ 100 ಹಂದಿ, ಮುನಿಕೃಷ್ಣ ಎಂಬುವರ 150 ಹಂದಿಗಳು ಜಲಾವಶೇಷಗೊಂಡಿವೆ. ಸಾಕಣೆ ಕೇಂದ್ರದಲ್ಲಿ ನುಗ್ಗಿ ಬಂದ ನೀರು ಪ್ರವಾಹ ಸೃಷ್ಟಿಸಿ ಹಂದಿಗಳು ಉಸಿರುಗಟ್ಟಿ ಸಾವನ್ನಪ್ಪಿವೆ. ಅಷ್ಟೂ ಹಂದಿಗಳ ಕಳೇಬರ ನೀರಿನಲ್ಲಿ ತೇಲುತ್ತಿರುವ ದೃಶ್ಯಕಂಡು ಸಾಕಣೆದಾರರು ಕಂಗಾಲಾಗಿದ್ದಾರೆ.

ಪಶುಪಾಲನೆ ಅಧಿಕಾರಿಗಳ ಭೇಟಿ: ಹಂದಿಗಳ ಸಾವಿನ ಸುದ್ದಿ ಕೇಳಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಶುಪಾಲನಾ ಇಲಾಖೆ ಅಧಿಕಾರಿಗಳು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಹಲವು ಹಂದಿಗಳನ್ನು ರಕ್ಷಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದ್ದು ಹಲವು ಹಂದಿಗಳು ಪ್ರಾಣಾಪಾಯದಿಂದ ಪಾರಾಗಿವೆ. ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ನಾಗರಾಜ್ ಸೂಚನೆ ಮೇರೆಗೆ ನಿರಂತರವಾಗಿ ಹಂದಿ ಸಾಕಣೆ ಕೇಂದ್ರಗಳಿಗೆ ಭೇಟಿ ನೀಡಿ ಹಂದಿಗಳ ಕ್ಷೇಮ ಪರಿಶೀಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.


ಪರಿಹಾರಕ್ಕೆ ಪ್ರಸ್ತಾವನೆ: ಮಳೆಹಾನಿ ಸಂಬಂಧಿಸಿದಂತೆ ರಾಷ್ಟ್ರೀಯ ವಿಪತ್ತು ನಿಧಿಯಡಿ ಸತ್ತ ಹಂದಿಗಳಿಗೆ ಸೂಕ್ತ ಪರಿಹಾರ ನೀಡುವ ಸಂಬಂಧ ಜಿಲ್ಲಾ ಪಶುಪಾಲನ ಇಲಾಖೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು ಶೀಘ್ರ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಸುರಿದ ಭಾರಿ ಮಳೆಗೆ ಹಂದಿ ಸಾಕಣೆ ಕೇಂದ್ರಗಳಿಗೆ ನೀರು ನುಗ್ಗಿ 500ಕ್ಕೂ ಹೆಚ್ಚು ಹಂದಿಗಳು ಜಲಸಮಾಧಿಯಾಗಿವೆ. ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹಲವು ಹಂದಿಗಳನ್ನು ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಮೃತ ಹಂದಿಗಳ ಸಂಬಂಧ ಪರಿಹಾರ ದೊರಕಿಸಿಕೊಡುವ ಸಲುವಾಗಿ ಜಿಲ್ಲಾಡಳಿತಕ್ಕೆ ವರದಿ ಕಳುಹಿಸಿಕೊಡಲಾಗಿದೆ. ವೈದ್ಯಾಧಿಕಾರಿಗಳು ಸಿಬ್ಬಂದಿ ನಿಯೋಜಿಸಿದ್ದು ಹಂದಿಗಳ ಆರೋಗ್ಯದ ಮೇಲೆ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ.
| ನಾಗರಾಜ್ ಉಪನಿರ್ದೇಶಕ ಪಶುಪಾಲನಾ ಇಲಾಖೆ

ಹಂದಿ ಸಾಕಣೆ ಕೇಂದ್ರಗಳಿಗೆ ನೀರು ನುಗ್ಗುತ್ತಲೇ ಇದ್ದು, ಐದಾರು ಅಡಿ ನೀರು ಸಂಗ್ರಹವಾಗಿದೆ, ಬದುಕಿರುವ ಹಂದಿಗಳನ್ನು ರಕ್ಷಣೆ ಮಾಡುವುದೇ ಹರಸಾಹಸ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಕಳವು ಪ್ರಕರಣ ನಿಂತಿಲ್ಲ, ಆಫ್ರಿಕನ್ ಹಂದಿಜ್ವರದ ಭೀತಿ ಇದೆ, ಜತೆಗೆ ಮಳೆ ಅವಾಂತರದಿಂದ ಸಾಕಷ್ಟು ನಷ್ಟ ಎದುರಿಸಬೇಕಾಗಿದೆ. ಸರ್ಕಾರ ಸಾಕಣೆದಾರರಿಗೆ ಸಹಾಯಹಸ್ತಚಾಚಬೇಕಿದೆ

| ಗಣೇಶ್ ಹಂದಿ ಸಾಕಣೆದಾರರು, ಹೊಸಕೋಟೆ

ವಿಜಯಪುರದಲ್ಲಿ ಸ್ಮಶಾನಗಳು ಜಲಾವೃತ : ಅಂತ್ಯಸಂಸ್ಕಾರಕ್ಕೆ ಪರದಾಟ
ವಿಜಯಪುರ: ಮಳೆಯಿಂದಾಗಿ ಹೊಲ ಗದ್ದೆಗಳಲ್ಲಿ ನೀರು ತುಂಬಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಶಿಡ್ಲಘಟ್ಟ-ವಿಜಯಪುರ ಮುಖ್ಯರಸ್ತೆಯ ಸ್ಮಶಾನದಲ್ಲಿ ಮಳೆ ನೀರು ನುಗ್ಗಿ ಜಲಾವೃತವಾಗಿದ್ದು, ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಪರದಾಡುವಂತಾಗಿದೆ.


ಪಟ್ಟಣದ ಆಂಜನೇಯಸ್ವಾಮಿ ದೇವಾಲಯ ಹಾಗೂ ಶೃಂಗೇರಿ ಶಾರದಾ ವಿದ್ಯಾಸಂಸ್ಥೆಯು ಸಂಪೂರ್ಣವಾಗಿ ಮುಳುಗಡೆಯಾಗಿವೆ. ದ್ರಾಕ್ಷಿ, ಹೂವು, ಕೋಸು, ಟೊಮ್ಯಾಟೊ, ಜೋಳ, ತೊಂಡೆಕಾಯಿ, ಬದನೆಕಾಯಿ, ಹೀರೆಕಾಯಿ, ಚಿಕ್ಕಡಿಕಾಯಿ, ಸೇರಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ನೀರು ಪಾಲಾಗಿವೆ. ರೇಷ್ಮೆಹುಳು ಸಾಕಣೆಗೆ ಹಿಪ್ಪುನೇರಳೆ ಸೊಪ್ಪು ಪೂರೈಕೆಗೆ ಸಮಸ್ಯೆಯಾಗಿದ್ದು, ರೈತರು ಪರದಾಡುವಂತಾಗಿದೆ.ವಿವಿಧೆಡೆ ಮನೆಗಳು ಕುಸಿತಗೊಂಡಿದ್ದು, ಜನ ಭಯಭೀತರಾಗಿದ್ದಾರೆ. ಹೊಲ-ಗದ್ದೆಗಳಿಗೆ ನೀರು ನುಗ್ಗಿರುವ ಕಾರಣ ದನ, ಕರುಗಳಿಗೆ ಮೇವಿನ ಅಭಾವ ಉಂಟಾಗಿದೆ. ಕುರಿಗಳು ಮೇಯಿಸಲಿಕ್ಕೆ ಜಾಗವಿಲ್ಲದೇ ಕುರಿಗಾಹಿಗಳು ಪರದಾಡುತ್ತಿದ್ದಾರೆ.

200ಕ್ಕೂ ಹೆಚ್ಚು ಕೋಳಿ ಮರಿ ಸಾವು: ಹೋಬಳಿಯ ನಾರಾಯಣಪುರದ ರೈತ ರಾಮಕೃಷ್ಣಪ್ಪ ಅವರಿಗೆ ಸೇರಿದ ಕೋಳಿ ಫಾರಂಗೆ ಮಳೆ ನೀರು ನುಗ್ಗಿ 200 ಕ್ಕೂ ಹೆಚ್ಚು ಕೋಳಿ ಸತ್ತಿವೆ.