ಬೆಂಗಳೂರು ಗ್ರಾಮಾಂತರ: ನಿಗದಿತ ದಾಖಲೆಗಳಿಲ್ಲದೆ ಜಾನುವಾರು ಸಾಗಣೆ ಮಾಡುವುದು ಅಪರಾಧವಾಗಿದೆ. ಜಾನುವಾರು ಖರೀದಿ, ಮಾರಾಟದ ಸಂದರ್ಭದಲ್ಲಿ ಜಾನುವಾರು ಕಿವಿ ಓಲೆ ಇರುವುದು ಕಡ್ಡಾಯ. ಸಂಬಂಧಪಟ್ಟ ಅಧಿಕಾರಿಗಳ ದೃಢೀಕರಣ ಪತ್ರವಿಲ್ಲದೆ ಜಾನುವಾರು ಸಾಗಿಸುತ್ತಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಎಚ್ಚರಿಕೆ ನೀಡಿದರು.
ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಕ್ರೀದ್ ವೇಳೆ ಅನಧಿಕೃತವಾಗಿ ಜಾನುವಾರು ವಧೆ ಹಾಗೂ ಸಾಗಣಿ ತಡೆಗಟ್ಟುವ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಾನುವಾರು ಸಾಗಣೆ ಅಧಿಕೃತವೇ ಎಂಬುದನ್ನು ಅಧಿಕಾರಿಗಳು ಖಾತ್ರಿ ಮಾಡಿಕೊಂಡು ಮುಂದಿನ ಕ್ರಮಕೈಗೊಳ್ಳಬೇಕು ಎಂದರು.
ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಜಾನುವಾರು ಸಾಗಾಣಿಕೆ ಮಾಡುವ ವಾಹನಗಳ ನೋಂದಣಿ ರದ್ದುಪಡಿಸಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಚೆಕ್ಪೋಸ್ಟ್ಗಳಲ್ಲಿ ನಿಗಾ: ಅನಧಿಕೃತವಾಗಿ ಜಾನುವಾರು ಸಾಗಿಸುತ್ತಿದ್ದಲ್ಲಿ ಅವನ್ನು ವಶಕ್ಕೆ ಪಡೆದು ಜಿಲ್ಲೆಯಲ್ಲಿರುವ ಗೋಶಾಲೆಗಳಿಗೆ ಸಾಗಿಸಬೇಕು, ಜಾನುವಾರುಗಳ ಅಕ್ರಮ ವಧೆ ಹಾಗೂ ಸಾಗಾಣಿಕೆ ತಡೆಗಟ್ಟಲು ಕಂದಾಯ, ಪೌರಾಡಳಿತ, ಪಂಚಾಯತ್ ರಾಜ್, ಪಶುಪಾಲನಾ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಗಳನ್ನೊಳಗೊಂಡ ಹೋಬಳಿವಾರು ಅಧಿಕಾರಿಗಳ ತಂಡ ರಚಿಸಿ ಎಲ್ಲ ಚೆಕ್ ಪೋಸ್ಟ್ಗಳಲ್ಲಿ ನಿಗಾವಹಿಸಬೇಕು ಎಂದು ಡಿಸಿ ನಿರ್ದೇಶಿಸಿದರು.
ಹಬ್ಬ ಸೌಹಾರ್ದವಾಗಿರಲಿ: ರಾಜ್ಯ ಚಂದ್ರ ದರ್ಶನ ಸಮಿತಿ ಘೋಷಣೆಯಂತೆ ಭಾನುವಾರ (ಜು.10) ಬಕ್ರೀದ್ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಶಾಂತಿ ಹಾಗೂ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್ ತಿಳಿಸಿದರು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಣಾ ಅಧಿನಿಯಮ 2020ರ ಅನ್ವಯ ಗೋಹತ್ಯೆ ನಿಷೇಧಿಸಲಾಗಿದ್ದು, ಈ ಕಾಯ್ದೆಯನ್ವಯ ಎಲ್ಲ ವಯಸ್ಸಿನ ಆಕಳು, ಕರು, ಹೋರಿ, ಎತ್ತು ಅಲ್ಲದೆ 13 ವರ್ಷದೊಳಗಿನ ಎಮ್ಮೆ, ಕೋಣಗಳನ್ನು ಹತ್ಯೆ ಮಾಡುವಂತಿಲ್ಲ. ಹಾಗೂ ಹೈಕೋರ್ಟ್ ಆದೇಶದನ್ವಯ ಒಂಟೆಗಳನ್ನೂ ಹತ್ಯೆ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ಬಕ್ರೀದ್ ವೇಳೆ ಯಾವುದೇ ಕಾಯ್ದೆ ಉಲ್ಲಂನೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಜಾನುವಾರು ಸಾಗಣೆಗೆ ಸಂಬಂಧಿಸಿದಂತೆ ಪಾಲಿಸಬೇಕಾದ ನಿಯಮಗಳನ್ನು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆಯಲ್ಲಿದೆ ಈ ಕಾಯ್ದೆಯಲ್ಲಿ ನಿಯಮಗಳನ್ನು ಉಲ್ಲಂಸದೆ ಸಾರ್ವಜನಿಕರು ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸಿ ಸಹಕರಿಸಬೇಕು ಎಂದು ತಿಳಿಸಿದರು.
ಕಂಟ್ರೋಲ್ ರೂಂಗೆ ಕರೆ ಮಾಡಿ: ಹಬ್ಬದ ಸಂದರ್ಭದಲ್ಲಿ ಜಾನುವಾರು ಅಕ್ರಮ ಸಾಗಾಣಿಕೆ ಹಾಗೂ ವಧೆಗಳ ಬಗ್ಗೆ ಸಾರ್ವಜನಿಕರು ಹತ್ತಿರದ ಪೋಲಿಸ್ ಠಾಣೆಗಳಿಗೆ ಮಾಹಿತಿ ನೀಡಬಹುದು. ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 94808 02400 ಗೆ ಕರೆ ಮಾಡಿ, ಮಾಹಿತಿ ಕೊಡಬಹುದು ಎಂದು ಡಿವೈಎಸ್ಪಿ ನಾಗರಾಜ್ ತಿಳಿಸಿದರು.
ಕಿರುಹೊತ್ತಿಗೆ ಬಿಡುಗಡೆ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಣಾ ಅಧಿನಿಯಮ 2020ರ ಕುರಿತು ಪಶುಪಾಲನೆ ಇಲಾಖೆ ಹೊರತಂದಿರುವ ಕಿರುಹೊತ್ತಗೆ ಬಿಡುಗಡೆ ಮಾಡಲಾಯಿತು.