ಜಿಲ್ಲೆ

ಹಳ್ಳಕೊಳ್ಳಗಳಲ್ಲಿ ರಸ್ತೆ ಹುಡುಕಾಟ: ಗುಂಡಿಮುಚ್ಚಿಸಲು ಮುಂದಾಗದ ಆಡಳಿತ

Bengaluru Rural

ನವೀನ್‌ಚಂದ್ರ ಶೆಟ್ಟಿ ಆನೇಕಲ್
ತಾಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಹಳ್ಳಬಿದ್ದ ರಸ್ತೆಗಳಲ್ಲಿ ನಿತ್ಯ ವಾಹನ ಸವಾರರು ಪ್ರಯಾಣಿಸುವುದೇ ದುಸ್ಸಾಹಸವಾಗಿದೆ. ಮಳೆ ಬಂದರಂತೂ ಪರಿಸ್ಥಿತಿ ಹೇಳತೀರದಾಗಿದೆ.


ಆನೇಕಲ್‌ನಿಂದ ಸಂಪರ್ಕ ಕಲ್ಪಿಸುವ ಹೊಸೂರು ರಸ್ತೆ ಹಾಗೂ ಚಂದಾಪುರ ರಸ್ತೆಗಳಲ್ಲಿ ಒಂದೆರಡು ಅಡಿಗಳಷ್ಟು ಹಳ್ಳ ನಿರ್ಮಾಣಗೊಂಡಿದ್ದು, ಅಪಘಾತಗಳಿಗೆ ಆಸ್ಪದ ಮಾಡಿಕೊಟ್ಟಿದೆ.


ಯಮಸ್ವರೂಪಿಯಂತಿರುವ ಈ ಮಾರ್ಗದಲ್ಲಿ ಸಾವಿರಾರು ಶಾಲಾ ಮಕ್ಕಳು ಹಾಗೂ ದ್ವಿಚಕ್ರ ವಾಹನ ಸವಾರರು ಜೀವ ಭಯದಲ್ಲಿಯೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕನಿಷ್ಠ ಗುಂಡಿಗಳನ್ನು ಮುಚ್ಚುವ ಗೋಜಿಗೂ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶ ಹೆಚ್ಚಿಸಿದೆ.


ಚಂದಾಪುರದಿಂದ ದೊಮ್ಮಸಂದ್ರಕ್ಕೆ ತೆರಳುವ ರಸ್ತೆಯೂ ಸಂಪೂರ್ಣ ಹಾಳಾಗಿದ್ದು, ಹಳ್ಳಗಳಲ್ಲಿ ರಸ್ತೆ ಯಾವುದೆಂದು ಹುಡುಕುವ ಸ್ಥಿತಿ ಇದೆ. ಈ ಮಾರ್ಗದಲ್ಲಿ ಆಗಾಗ್ಗೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಅತ್ತಿಬೆಲೆ ಮಾರ್ಗವಾಗಿ ಹೊಸೂರಿಗೆ ಹೋಗುವ ಬಳ್ಳೂರು ರಸ್ತೆಯ ಸ್ಥಿತಿಯೂ ಭಿನ್ನವಾಗಿಲ್ಲ. ಹಾಗೆಯೇ ಆನೇಕಲ್‌ನಲ್ಲಿ ಲೊಕೋಪಯೋಗಿ ಇಲಾಖೆ ವ್ಯಾಪ್ತಿಯ ಹೊಸೂರು ರಸ್ತೆ, ಬನ್ನೇರುಘಟ್ಟ ಸಂಪರ್ಕ ವೃತ್ತಗಳಲ್ಲಿ ಗುಂಡಿಗಳ ಕಾರುಬಾರು ಜೋರಾಗಿದೆ. ಪಟ್ಟಣದ ಹೃದಯ ಭಾಗವಾದ ದೇವರಕೊಂಡಪ್ಪ ವೃತ್ತ, ಡೇರಿ ಮುಂಭಾದಲ್ಲಿ ದೊಡ್ಡದೊಡ್ಡ ಗುಂಡಿ ಬಿದ್ದಿದ್ದು, ಇತ್ತೀಚೆಗೆ ಮಳೆ ಸುರಿದ ಪರಿಣಾಮ ರಸ್ತೆ ಸಣ್ಣ-ಸಣ್ಣ ಕೆರೆಯಂತೆ ಕಾಣಿಸುತ್ತಿದೆ.
ವರ್ಷಪೂರ್ತಿ ಕಿರಿಕಿರಿ: ತಾಲೂಕಿನ ಬಹುತೇಕ ರಸ್ತೆಗಳ ಸ್ಥಿತಿ ಚಿಂತಾಜನಕವಾಗಿದೆ. ಹದಗೆಟ್ಟ ರಸ್ತೆಗಳಲ್ಲಿ ಬೇಸಿಗೆಯಲ್ಲಿ ಧೂಳಿನ ಸಮಸ್ಯೆ ಅನುಭವಿಸುವ ವಾಹನ ಸವಾರರು, ಮಳೆಗಾಲದಲ್ಲಿ ಎದುರಾಗುವ ಕೆಸರಿನಲ್ಲಿ ಬಿದ್ದು ಗಾಯಗೊಳ್ಳುವಂತಾಗಿದೆ.

ಬಿಜೆಪಿ ಸರ್ಕಾರ ಇರುವುದರಿಂದ ಕಾಂಗ್ರೆಸ್ ಶಾಸಕರಿರುವ ಕಡೆಗಳಲ್ಲಿ ಹೆಚ್ಚು ಅನುದಾನ ನೀಡುತ್ತಿಲ್ಲ. ಹಾಗಾಗಿ ಕಾಮಗಾರಿಗಳಿಗೆ ತೊಡಕಾಗಿದೆ. ಗಡಿ ಭಾಗವಾದ ಆನೇಕಲ್ ತಾಲೂಕು ಅಭಿವೃದ್ಧಿಗೆ ಸರ್ಕಾರ ಹೆಚ್ಚು ಅನುದಾನ ನೀಡಬೇಕಿತ್ತು. ಆದರೆ ಸಂಪೂರ್ಣವಾಗಿ ತಾಲೂಕನ್ನು ನಿರ್ಲಕ್ಷ್ಯ ಮಾಡಿದೆ.
| ಬಿ.ಶಿವಣ್ಣ
ಶಾಸಕ

ಕೆಲ ರಸ್ತೆಗಳ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಗುಣಮಟ್ಟ ಕಾಪಾಡುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಶ್ನೆ ಮಾಡದ ಪರಿಣಾಮ ರಸ್ತೆಗೆ ಡಾಂಬರು ಹಾಕಿದ ಎರಡು ಮೂರು ತಿಂಗಳಿಗೆ ಕಿತ್ತು, ಗುಂಡಿಮಯವಾಗುತ್ತಿವೆ.
| ರವಿ ವಾಹನ ಸವಾರ