ಬೆಂ.ಗ್ರಾಮಾಂತರ: ಹರ್ ಘರ್ ತಿರಂಗಾ ಯಶಸ್ಸಿಗೆ ಬೆವರು ಸುರಿಸಿದ ಜಿಲ್ಲಾಡಳಿತ ಸ್ವಾತಂತ್ರ್ಯ ದಿನಾಚರಣೆ ಬಳಿಕ ಹಾರಿದ ತಿರಂಗಾಗಳ ಕಥೆ ಏನಾಯಿತು ಎಂಬುದನ್ನೇ ಮರೆತುಬಿಟ್ಟಿದೆ. ಇದರ ಪ್ರತಿಲವಾಗಿ ಆ.13ರಂದೇ ಧ್ವಜಾರೋಹಣಗೊಂಡ ತ್ರಿವರ್ಣ ಧ್ವಜಗಳು ಇಂದಿಗೂ ಹಾರಾಡುತ್ತಲೇ ಇವೆ.
ಮಳೆಗಾಳಿಗೆ ಸಿಲುಕಿ ಹಲವು ಕಡೆಗಳಲ್ಲಿ ಧ್ವಜಗಳು ಹರಿದುಹೋಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಕೊಳೆಯಾಗಿವೆ. ಹರ್ ಘರ್ ತಿರಂಗಾ ಹಾರಿಸುವ ಬಗ್ಗೆ ಸಾಕಷ್ಟು ಅರಿವು ಮೂಡಿಸಿದ್ದ ಜಿಲ್ಲಾಡಳಿತ ಬಳಿಕ ಅದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಮುಗುಮ್ಮಾಗಿದೆ. ಪರಿಣಾಮವಾಗಿ ಧ್ವಜಾರೋಹಣ ನಿಯಮಗಳಿಗೆ ತಿಲಾಂಜಲಿ ಇಟ್ಟ್ಟಂತಾಗಿದೆ.
ಅಧಿಕಾರಿಗಳು ಸುಸ್ತಾದರು: ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಸರ್ಕಾರದ ಹರ್ ಘರ್ ತಿರಂಗಾ ೋಷಣೆಯಂತೆ ಎಲ್ಲ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಸಂಬಂಧ ಇಡೀ ಜಿಲ್ಲಾಡಳಿತ ವಾರದಿಂದಲೇ ತಾಲೀಮು ನಡೆಸಿ ಅಭಿಯಾನಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತ್ತು. ದೇಶಾಭಿಮಾನಿಗಳೆಲ್ಲರೂ ಸರ್ಕಾರದ ನಿಯಮದಂತೆ ಧ್ವಜ ಸಂಹಿತೆ ಅನುಸಾರ ತ್ರಿವರ್ಣ ಧ್ವಜ ಹಾರಿಸುವಂತೆ ಜನರಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸುವಲ್ಲಿ ಅಧಿಕಾರಿಗಳು ಸಾಕಷ್ಟು ಬೆವರು ಹರಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದರು. ಇದಕ್ಕಾಗಿ ಹಗಲಿರಳು ಶ್ರಮಿಸಿದ ಹಿರಿಕಿರಿಯ ಅಧಿಕಾರಿಗಳು ಕಾರ್ಯಕ್ರಮದ ಬಳಿಕ ಸುಸ್ತಾದವರಂತೆ ಸುಮ್ಮನಾಗಿದ್ದಾರೆ.
ಅಪಾಯಕಾರಿ ಜಾಗಗಳಲ್ಲಿ ಧ್ವಜಾರೋಹಣ: ಕಟ್ಟಡಗಳಲ್ಲದೆ ವಿದ್ಯುತ್ ಕಂಬ, ಬೃಹತ್ ಮರಗಳ ಕೊಂಬೆಗಳು ಸೇರಿ ಅಪಾಯಕಾರಿಯಾದ ಸ್ಥಳಗಳಲ್ಲಿಯೂ ಜನ ತ್ರಿವರ್ಣ ಧ್ವಜ ಹಾರಿಸುವ ಮೂಲಕ ರಾಷ್ಟ್ರಪ್ರೇಮ ಪ್ರದರ್ಶಿಸಿದ್ದರು. ಆದರೆ ಆ.15 ರ ಸಂಜೆ ಬಳಿಕ ಹಾರಿಸಿದ ಧ್ವಜಗಳನ್ನು ಗೌರವಯುತವಾಗಿ ಇಳಿಸಿ ಶಿಸ್ತುಬದ್ಧವಾಗಿ ಧ್ವಜವನ್ನು ಸಂರಕ್ಷಿಸುವಂತೆ ಕರೆ ನೀಡಲಾಗಿತ್ತು. ಆದರೆ ಬಹುತೇಕ ಕಡೆಗಳಲ್ಲಿ ಇದು ಪಾಲನೆಯಾಗಿಲ್ಲ. ಇಂದಿಗೂ ವಿದ್ಯುತ್ ಕಂಬ ಸೇರಿ ಎಲ್ಲೆಂದರಲ್ಲಿ ಧ್ವಜಗಳು ಕಂಡುಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಯಾರೂ ಗಮನಹರಿಸುತ್ತಿಲ್ಲ. ಧ್ವಜಾರೋಹಣಕ್ಕೆ ತೋರಿಸಿದ ಉತ್ಸಾಹ ಬಳಿಕ ಪಾಲನೆಯಾಗಬೇಕಾದ ನಿಯಮಗಳ ಬಗ್ಗೆ ಕಾಳಜಿವಹಿಸದಿರುವುದು ಕಂಡುಬರುತ್ತಿದೆ.
ಸ್ಥಳೀಯ ಆಡಳಿತಕ್ಕೂ ಕಾಳಜಿ ಇಲ್ಲ: ಪುರಸಭೆ, ನಗರಸಭೆ ಸೇರಿ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಧ್ವಜಾ ಅವರೋಹಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ವಿಲವಾಗಿದ್ದಾರೆ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಹಾರುತ್ತಿರುವ ಧ್ವಜಗಳನ್ನು ಗೌರವಯುತವಾಗಿ ಇಳಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ರಾಷ್ಟ್ರಧ್ವಜಗಳನ್ನು ಶಿಸ್ತುಬದ್ಧವಾಗಿ ನಿರ್ವಹಣೆ ಮಾಡಬೇಕು, ಇಲ್ಲವಾದರೆ ಗಾಳಿ ಮಳೆಗೆ ಹರಿದು ಹಾಳಾಗುತ್ತವೆ. ರಾತ್ರಿಯ ವೇಳೆಯೂ ಧ್ವಜಗಳು ಹಾರುತ್ತಿರುವುದು ಧ್ವಜಸಂಹಿತೆ ಗಾಳಿಗೆ ತೂರಿದಂತಾಗಿದೆ.
ವಿದ್ಯುತ್ ಕಂಬ ಸೇರಿ ಸಿಕ್ಕ ಸಿಕ್ಕ ಕಡೆ ರಾಷ್ಟ್ರಧ್ವಜಗಳು ಹಾರಾಡುತ್ತಿವೆ. ಇದುವರೆಗೂ ಧ್ವಜಗಳನ್ನು ಅವರೋಹಣ ಮಾಡಿಲ್ಲ. ಈ ಕುರಿತು ಸ್ಥಳೀಯವಾಗಿ ಪುರಸಭೆಯವರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ಅವರು ಜನರಿಗೆ ಅರಿವು ಮೂಡಿಸಿ, ಧ್ವಜಗಳನ್ನು ತೆರವುಗೊಳಿಸಲು ಸೂಚಿಸಬೇಕು.