ಜಿಲ್ಲೆ

ಜಿಪಂನಿಂದ ಮನೆಮನೆಗೆ ಗಂಗೆ: 1,141 ಗ್ರಾಮಗಳಿಗೆ ನಳದ ನೀರು

Bengaluru Rural

ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ
ಜಲಜೀವನ್ ಮಿಷನ್ (ಜೆಜೆಎಂ) ನ ನಳದ ಮೂಲಕ ನೀರು ಹರಿಸುವ ‘ಮನೆಮನೆಗೆ ಗಂಗೆ’ ಯೋಜನೆ ಚುರುಕು ಪಡೆದಿದೆ. ಜಿಲ್ಲೆಯ 1141 ಗ್ರಾಮಗಳಿಗೆ 880 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ.


ವ್ಯಕ್ತಿಯೊಬ್ಬರಿಗೆ ಪ್ರತಿದಿನ ಕನಿಷ್ಠ 55 ಲೀಟರ್ ನೀರಿನ ಅಗತ್ಯವಿರುವ ಬಗ್ಗೆ ಅಂದಾಜಿಸಿದ್ದು, ಅದನ್ನು ಮನೆಮನೆಗೂ ಪೂರೈಸಲು ಜಿಲ್ಲೆಯಾದ್ಯಂತ ಜಲಜೀವನ್ ಮಿಷನ್ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳ ಮೂಲಕ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಜಿಪಂ ಈ ನಿಟ್ಟಿನಲ್ಲಿ ಈಗಾಗಲೇ ಪಿಡಿಒಗಳ ಮೂಲಕ ಹಳ್ಳಿಗಳ ಸರ್ವೇ ನಡೆಸುತ್ತಿದೆ. ಈಗಾಗಲೇ 520 ಗ್ರಾಮಗಳ ಸರ್ವೇ ಪೂರ್ಣಗೊಂಡಿದ್ದು, ಅಷ್ಟೂ ಗ್ರಾಮಗಳಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. 267 ಗ್ರಾಮಗಳಲ್ಲಿ ಟೆಂಡರ್ ಕರೆಯಲಾಗಿದೆ. ಒಂದೂವರೆಯಿಂದ 2 ವರ್ಷದ ಕಾಲಾವಧಿಯಲ್ಲಿ ಈ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಪಂ ಕಾರ್ಯಪ್ರವೃತ್ತವಾಗಿದೆ.

ನೀರು ಪೂರೈಕೆ ಹೇಗೆ?: ಜಿಲ್ಲೆಯ ಅಷ್ಟೂ ಹಳ್ಳಿಗಳಲ್ಲಿನ ಕುಟುಂಬದ ಸಂಖ್ಯೆ ಹಾಗೂ ಜನಸಂಖ್ಯೆಯನ್ನು ಲೆಕ್ಕ ಹಾಕುವುದು, ಇದರಲ್ಲಿ ಎಷ್ಟು ಮನೆಗಳಿಗೆ ಈಗಾಗಲೇ ಕೊಳಾಯಿ ಸೌಲಭ್ಯವಿದೆ, ಇಲ್ಲ ಎಂಬುದನ್ನು ಸರ್ವೇ ಮಾಡಿ ವರದಿ ಸಿದ್ಧಪಡಿಸಲಾಗುತ್ತಿದೆ. ಇದರ ಆಧಾರದ ಮೇಲೆ ನೀರು ಪೂರೈಸಲಾಗುವುದು. ಬರಪೀಡಿತ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಈ ಯೋಜನೆ ಜಿಲ್ಲೆಯ ಜನರಿಗೆ ವರದಾನವಾಗಲಿದೆ. ಶಾಶ್ವತ ನೀರಾವರಿ ಯೋಜನೆಗಳು ಜಾರಿಗೊಳ್ಳುತ್ತಿರುವ ಈ ದಿನಗಳಲ್ಲಿ ಜಲಜೀವನ್ ಮಿಷನ್ ಸಮರ್ಪಕ ಅನುಷ್ಠಾನಕ್ಕೆ ಜಿಪಂ ಹೆಚ್ಚಿನ ಕಾಳಜಿ ವಹಿಸಿದೆ.

ಸರ್ಕಾರಗಳ ಪಾಲು: ಈ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಲಾ ಶೇ.45 ಅನುದಾನ ನೀಡಬೇಕಿದೆ. ಇನ್ನುಳಿದ ಶೇ.10 ಅನುದಾನವನ್ನು ಸ್ಥಳೀಯ ಆಡಳಿತದಿಂದ ಭರಿಸಬೇಕಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಯೋಜನೆಯ ಪ್ರಗತಿಗೆ ವೇಗ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ದೊಡ್ಡಬಳ್ಳಾಪುರಕ್ಕೆ 22 ಕೋಟಿ.ರೂ:
ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈ ಯೋಜನೆ ಸಾಕಷ್ಟು ಚುರುಕುಗೊಂಡಿದ್ದು, ಇಲ್ಲಿನ 22 ಗ್ರಾಮಗಳಿಗೆ ಹೊಸಹಳ್ಳಿ, ಗುಂಡಮಗೆರೆ ಕೆರೆಗಳ ಜಲಮೂಲಗಳಿಂದ ನೀರು ಬಳಕೆಗೆ 22 ಕೋಟಿ ರೂ.ವೆಚ್ಚ ಅಂದಾಜಿಸಲಾಗಿದೆ. ಈ ಸಂಬಂಧ ವರದಿಯನ್ನು ಸಚಿವ ಸಂಪುಟಕ್ಕೆ ಕಳುಹಿಸಲಾಗಿದ್ದು, ಇದು ಸರ್ಕಾರದ ಮಟ್ಟದಲ್ಲಿದೆ. ಆದಷ್ಟ್ಟು ಶೀಘ್ರವಾಗಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜಿಪಂ ಶ್ರಮಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪ್ರಧಾನಿಯಿಂದ ಯೋಜನೆ ಪ್ರಕಟ:
2019ರ ಆ.15 ರಂದು ಪ್ರತಿ ಮನೆಗೂ ಕೊಳಾಯಿ ಮೂಲಕ ಶುದ್ಧ ನೀರು ಒದಗಿಸುವ ಜಲ ಜೀವನ್‌ಮಿಷನ್ ಯೋಜನೆಯನ್ನು ಪ್ರಧಾನಮಂತ್ರಿ ಪ್ರಕಟಿಸಿದ್ದರು. 2021ರ ಅ.2ರಂದು ವಿಡಿಯೋ ಕಾನ್ಫರೆನ್ಸ್ ಪ್ರಧಾನಿಗಳು ಗ್ರಾಪಂ ಮತ್ತು ಜಲಜೀವನ್‌ಮಿಷನ್ ಸಮಿತಿ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳೊಂದಿಗೆ ಸಂವಾದ ನಡೆಸಿದ್ದರು. ಅಂದು 2024ರ ವೇಳೆಗೆ ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ಕೊಳಾಯಿ ನೀರಿನ ಸಂಪರ್ಕ ಕಲ್ಪಿಸುವ ಗುರಿ ನೀಡಲಾಗಿತ್ತು.


ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳ ಪ್ರತಿ ಮನೆಗೆ ಕೊಳಾಯಿ ಮೂಲಕ ನೀರು ಪೂರೈಸುವ ಮನೆಮನೆಗೆ ಗಂಗೆ ಯೋಜನೆ ಜಿಲ್ಲೆಯಲ್ಲಿ ಚುರುಕು ಪಡೆದಿದೆ. ಮೊದಲ ಹಂತದಲ್ಲಿ 1141 ಗ್ರಾಮಗಳಿಗೆ 880 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಲಾಗಿದೆ. ಕೆಲವೊಂದು ಕಡೆಗಳಲ್ಲಿ ಸರ್ವೇ ಪೂರ್ಣಗೊಂಡಿದೆ. ಮತ್ತೆ ಕೆಲವೆಡೆ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಒಂದೂವರೆಯಿಂದ 2 ವರ್ಷದ ಕಾಲಾವಧಿಯಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
| ರೇವಣಪ್ಪ ಜಿಪಂ ಸಿಇಒ