ದೊಡ್ಡಬಳ್ಳಾಪುರ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಸಾಧನಾ ಸಮಾವೇಶ ನಡೆಯಲಿದೆ. ಮೂರು-ನಾಲ್ಕು ಜಿಲ್ಲೆಗಳಿಂದ ಜನರು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಮುಖಂಡರೊಂದಿಗೆ ಸಭೆ ಬಳಿಕ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಿದೆ. ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಜು.28ಕ್ಕೆ ವರ್ಷವಾಗಲಿದೆ. ಹೀಗಾಗಿ ದೊಡ್ಡಬಳ್ಳಾಪುರದ ಹೊರವಲಯ ರುನಾಥಪುರ ಬಳಿ ಸಮಾವೇಶ ನಡೆಸಲು ಸ್ಥಳ ನಿಗದಿ ಮಾಡಲಾಗಿದೆ ಎಂದರು. ಬಿಜೆಪಿ ಸರ್ಕಾರ ಯುವಜನರು, ಮಹಿಳೆಯರು, ರೈತರು ಸೇರಿ ಪ್ರತಿಯೊಬ್ಬರಿಗೂ ಅನುಕೂಲ ಮಾಡಿಕೊಟ್ಟಿದೆ. ಎಷ್ಟೇ ಆರ್ಥಿಕ ಪರಿಸ್ಥಿತಿ ಹದಗೆಟ್ಟರೂ ಕೋವಿಡ್ ಸಾಂಕ್ರಾಮಿಕ ಯುದ್ಧವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜತೆಯಾಗಿ ರಾಜ್ಯ ಸರ್ಕಾರ ಯಶಸ್ವಿಯಾಗಿ ನಿರ್ವಹಣೆ ಮಾಡಿದೆ. ಕರೊನಾ ಸಂದರ್ಭದಲ್ಲಿನ ಸಮಸ್ಯೆ ನಿವಾರಿಸಿ ಇಡೀ ವ್ಯವಸ್ಥೆಯನ್ನು ಪುನಶ್ಚೇತನ ಮಾಡಲಾಗುತ್ತಿದೆ ಎಂದರು.
ಪಕ್ಕದ ಶ್ರೀಲಂಕಾ ಲಾಕ್ಡೌನ್ ಬಳಿಕ ದಿವಾಳಿಯಾಗಿದೆ. ಆದರೆ ಅಮೆರಿಕ ಅತ್ಯಂತ ವೇಗದ ಪ್ರಗತಿ ಕಂಡಿದೆ. ಅದೇ ರೀತಿ ಆರ್ಥಿಕ ಪ್ರಗತಿ ಕಾಣುತ್ತಿರುವ ದೇಶಗಳಲ್ಲಿ ಭಾರತ ಒಂದಾಗಿದೆ. ಇದಕ್ಕೆ ಪ್ರಧಾನಿ ಅವರ ಆಡಳಿತ ವೈಖರಿಯೇ ಕಾರಣ. ಹಾಗೆಯೇ ರಾಜ್ಯದ ಆರ್ಥಿಕ ಪ್ರಗತಿಗೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಬೊಮ್ಮಾಯಿ ಅವರ ಸಮರ್ಥ ಆಡಳಿತ ಕಾರಣ ಎಂದರು.
ಜನ ಬೆಂಬಲ: ಈ ಭಾಗದಲ್ಲಿ ಬಿಜೆಪಿ ಶಾಸಕರು ಅತೀ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದರೂ ಜನರ ಭಾವನೆಗೆ ಪೂರಕವಾಗಿ ಇಲ್ಲಿ ಸಮಾವೇಶ ನಡೆಸಲು ಅವಕಾಶ ದೊರೆತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದೊಂದಿಗೆ ಹಾಗೂ ಪದೊಂದಿಗೆ ನಾವಿದ್ದೇವೆ ಎಂದು ತೋರಿಸಿಕೊಡಲಿದ್ದಾರೆ. ಜನರು ಬಿಜೆಪಿ ಮೇಲೆ ಹೇಗೆ ವಿಶ್ವಾಸ ಇರಿಸಿದ್ದಾರೆ ಎಂಬುದು ಸಾ ಸಮೇತ ಸಾಬೀತಾಗಲಿದೆ ಎಂದು ಸಚಿವರು ತಿಳಿಸಿದರು.
ಮಂಕಿ ಪಾಕ್ಸ್ ಕಂಡುಬಂದಿಲ್ಲ: ರಾಜ್ಯದಲ್ಲಿ ಮಂಕಿ ಪಾಕ್ಸ್ ಪ್ರಕರಣ ಕಂಡುಬಂದಿಲ್ಲ. ಈ ಕುರಿತು ವಿಮಾನ ನಿಲ್ದಾಣ, ಬಂದರುಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಮಾರ್ಗಸೂಚಿ ಪಾಲಿಸಲಾಗುತ್ತಿದೆ. ಇದಕ್ಕೆ ಬೇಕಾದ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದೊಳಗೆ ಸೋಂಕು ನುಸುಳದಂತೆ ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕು ರುನಾಥಪುರ ಬಳಿ ಬಿಜೆಪಿ ಸಾಧನ ಸಮಾವೇಶಕ್ಕಾಗಿ ಸಚಿವ ಸುಧಾಕರ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಮಾಡಲಾಯಿತು. ಶಾಸಕ ಎಸ್.ಆರ್ ವಿಶ್ವನಾಥ್, ಎಂಎಲ್ಸಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಸಂಪಂಗಿ, ಎ. ರವಿ, ಪಿಳ್ಳಮುನಿಶಾಮಪ್ಪ, ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಮುಖಂಡ ಧೀರಜ್ ಮುನಿರಾಜು ಮತ್ತಿತರರು ಇದ್ದರು.