ಗರುಡಾಚಾರ್‌ಪಾಳ್ಯದಲ್ಲಿ ಭಾನುವಾರ ಶ್ರೀ ಸಾಯಿ ಉತ್ತರ ಕರ್ನಾಟಕ ಯುವಕರ ಶ್ರೇಯೋಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸಚಿವ ಎಂಟಿಬಿ ನಾಗರಾಜ್, ಪಾಲಿಕೆ ಮಾಜಿ ಸದಸ್ಯ ನಿತೀಶ್ ಪುರುಷೋತ್ತಮ್, ಸಂಘದ ಅಧ್ಯಕ್ಷ ನಂದಕುಮಾರ್, ಮುಖಂಡರಾದ ಸಿ.ಮುನಿರಾಜ್, ವೀರಚಿಕ್ಕೆಗೌಡ, ರವಿಕುಮಾರ್ ಮತ್ತಿತರರು ಇದ್ದರು. 
ಜಿಲ್ಲೆ

ಸಂಘ-ಸಂಸ್ಥೆಗಳು ಸಮಾಜದ ಅಭ್ಯುದಯಕ್ಕೆ ಶ್ರಮಿಸಲಿ: ಸಚಿವ ಎಂಟಿಬಿ ನಾಗರಾಜ್ ಆಶಯ

Bengaluru Rural

ಬೆಂಗಳೂರು ಗ್ರಾಮಾಂತರ: ಸಂಘ-ಸಂಸ್ಥೆಗಳು ಸಾರ್ವಜನಿಕರ ಸೇವೆ ಮಾಡುವ ಮೂಲಕ ಸಮಾಜದ ಅಭ್ಯುದಯಕ್ಕೆ ಶ್ರಮಿಸಬೇಕು ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕಾ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.


ಗರುಡಾಚಾರ್‌ಪಾಳ್ಯದಲ್ಲಿ ಭಾನುವಾರ ಶ್ರೀಸಾಯಿ ಉತ್ತರ ಕರ್ನಾಟಕ ಯುವಕರ ಶ್ರೇಯೋಭಿವೃದ್ಧಿ ಸಂಘದ ನೂತನ ಘಟಕ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.


ಸಂಘ ಸಂಸ್ಥೆಗಳ ಉದ್ದೇಶ ಸಾರ್ವಜನಿಕರ ಸೇವೆ ಮಾಡುವುದಾಗಿರಬೇಕು. ಸಮಾಜದಲ್ಲಿ ಬಡವರಿಗೆ ಶಿಕ್ಷಣ, ವೈದ್ಯಕೀಯ ಮುಂತಾದ ಕ್ಷೇತ್ರದಲ್ಲಿನ ಕುಂದುಕೊರತೆ ನಿವಾರಿಸಲು ಸಂಘ-ಸಂಸ್ಥೆಗಳು ನೆರವಾಗಬೇಕು ಎಂದು ಸಲಹೆ ನೀಡಿದರು.


ಸಂಘ-ಸಂಸ್ಥೆಗಳು ಸಮಾಜದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಹಾಗೇಯೇ ಉತ್ತಮ ಸಂದೇಶ ರವಾನಿಸಬೇಕು ಎಂದು ಕರೆ ನೀಡಿದರು.


ಕರೊನಾ ಹಾಗೂ ನಂತರದ ದಿನಗಳಲ್ಲಿ ರಕ್ತ ನಿಧಿಗಳಲ್ಲಿ ರಕ್ತದ ಕೊರತೆ ಹೆಚ್ಚಾಗಿದೆ, ಕೋವಿಡ್ ಭೀತಿಯಿಂದ ಜನ ರಕ್ತದಾನಕ್ಕೆ ಹಿಂಜರಿಯುತ್ತಿದ್ದಾರೆ, ಅಂಥವರ ಮನವೊಲಿಸಿ ರಕ್ತದಾನಕ್ಕೆ ಪ್ರೇರಿಸಬೇಕು. ಆರೋಗ್ಯವಂತ ಯುವಸಮುದಾಯ ರಕ್ತದಾನದ ಮೂಲಕ ಮತ್ತೊಬ್ಬರಿಗೆ ಹೊಸ ಜೀವನ ಕೊಡುವತ್ತ ಸಂಕಲ್ಪ ಮಾಡಬೇಕು ಎಂದರು.
ನಾನೊಬ್ಬ ಉದ್ಯಮಿಯಾಗಿದ್ದರೂ ಸಮಾಜ ಸೇವೆ ಮಾಡಬೇಕೆಂಬ ಅದಮ್ಯ ಕನಸಿನೊಂದಿಗೆ ರಾಜಕೀಯ ಪ್ರವೇಶಿಸಿದೆ. ಅಧಿಕಾರವಿರಲಿ, ಇಲ್ಲದಿರಲಿ ನನ್ನ ಕೊನೆಯುಸಿರಿರುವವರೆಗೆ ಸಮಾಜಸೇವೆ ಮಾಡುತ್ತೇನೆ ಎಂದರು.


ಸಂಘದ ಕಾಳಜಿ ಸಂತಸ ತಂದಿದೆ: ಸಮಾಜದಲ್ಲಿ ಉತ್ತಮ ಕೆಲಸ ಮಾಡಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸದುದ್ದೇಶದೊಂದಿಗೆ ಯುವಕರೆಲ್ಲರೂ ಸೇರಿ ಶ್ರೀಸಾಯಿ ಉತ್ತರ ಕರ್ನಾಟಕ ಯುವಕರ ಶ್ರೇಯೋಭಿವೃದ್ಧಿ ಸಂಘವನ್ನು ಹುಟ್ಟುಹಾಕಿದ್ದಾರೆ, ಘಟಕ ಉದ್ಘಾಟನೆ ವೇಳೆ ರಕ್ತದಾನ ಶಿಬಿರ ಹಮ್ಮಿಕೊಂಡು ಸಾಮಾಜಿಕ ಕಳಕಳಿ ಪ್ರದರ್ಶಿಸಿರುವುದು ಸಂತಸ ತಂದಿದೆ ಎಂದು ಗರುಡಾಚಾರ್ ಪಾಳ್ಯದ ಪಾಲಿಕೆ ಮಾಜಿ ಸದಸ್ಯ ನಿತೀಶ್ ಪುರುಷೋತ್ತಮ್ ಹೇಳಿದರು.
ಇಂಥ ಸಂಘಗಳಲ್ಲಿ ಯುವಸಮುದಾಯ ಹೆಚ್ಚಿನಮಟ್ಟದಲ್ಲಿ ತೊಡಗಿಸಿಕೊಂಡು ಜನಪರ ಕೆಲಸ ಮಾಡಬೇಕು. ಯುವಸಂಪನ್ಮೂಲವನ್ನು ಸಮಾಜದ ಒಳಿತಿಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

50ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.