ಬೆಂಗಳೂರು ಗ್ರಾಮಾಂತರ: ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿಯ ನಡುವೆಯೂ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ವಿಸ್ತಾರಗೊಳ್ಳುತ್ತಿದೆ. 4-5 ವರ್ಷದಿಂದ ಉತ್ತಮ ಇಳುವರಿ ದೊರೆತು ರೈತರೂ ಖುಷಿಯಾಗಿದ್ದಾರೆ. ಈ ಬಾರಿಯೂ ಉತ್ತಮ ಇಳುವರಿ ನಿರೀಕ್ಷೆಯಿದ್ದು, 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಬಾರಿ ಪೂರ್ವಮುಂಗಾರು ಮಳೆ ಮೇನಲ್ಲೇ ಭೂಮಿ ತಣಿಸಿತ್ತು. ವಾಯುಭಾರ ಕುಸಿತದಿಂದಾದ ಅಕಾಲಿಕ ಮಳೆಯಿಂದಾಗಿ ಪ್ರಸಕ್ತ ಸಾಲಿನಲ್ಲಿ ಏಪ್ರಿಲ್ನಲ್ಲೇ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದವು. ಹವಾಮಾನ ಇಲಾಖೆ ಮಾಹಿತಿಯಂತೆ ಈ ಬಾರಿಯ ಮುಂಗಾರು ಉತ್ತಮವಾಗಿದ್ದು, ಭೂಮಿ ಉಳುಮೆ ಸೇರಿ ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ. 4-5 ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬಿತ್ತನೆ ದಾಖಲೆ ಪ್ರಮಾಣದಲ್ಲಿ ಆಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಪರ್ಯಾಯ ಬೆಳೆಯತ್ತ ಒಲವು: ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜೋಳ ಬೆಳೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ನೀರಾವರಿ ಅನುಕೂಲವಿರುವ ಕೆಲವೊಬ್ಬ ರೈತರಷ್ಟೇ ಜೋಳ ಬೆಳೆಯಲು ಆಸಕ್ತಿ ತೋರಿಸುತ್ತಿದ್ದರು. ಆದರೆ 5 ವರ್ಷದಿಂದೀಚೆಗೆ ಜೋಳ ಬೆಳೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಉತ್ತಮ ಮಳೆಯಿಂದಾಗಿ ಕೆರೆ-ಕಟ್ಟೆಗಳು ಭರ್ತಿಯಾಗಿದ್ದು, ಅಂತರ್ಜಲವೂ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಕೆರೆ&ಕಟ್ಟೆ ಸುತ್ತಮುತ್ತಲಿನ ಪ್ರದೇಶದ ರೈತರು ಜೋಳ ಬೆಳೆಯಲು ಮನಸ್ಸು ಮಾಡಿದ್ದಾರೆ.
ತೊಗರಿ, ಸ್ವಾಮೆ ಬಿತ್ತನೆ: ಈ ಬಾರಿ ಜಿಲ್ಲೆಯ 9 ಸಾವಿರ ಹೆಕ್ಟೇರ್ನಲ್ಲಿ ಜೋಳ ಬಿತ್ತನೆಯಾಗಲಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಕಳೆದ ಬಾರಿ ಮುಂಗಾರು ಮಳೆ ನಿರೀಕ್ಷೆಯಂತೆ ಬೀಳದಿದ್ದ ಹಿನ್ನೆಲೆಯಲ್ಲಿ ಜೋಳದ ಬೆಳೆಗೆ ಆಸಕ್ತಿ ತೋರಿದ್ದ ಬಹುತೇಕ ರೈತರು ಮತ್ತೆ ರಾಗಿ ಸಲಿನತ್ತ ಮುಖಮಾಡಿದ್ದರು. ಆದರೆ ಈ ಬಾರಿ ಪೂರ್ವಮುಂಗಾರು ಉತ್ತಮವಾಗಿರುವುದರಿಂದ ಜೋಳವೂ ರೈತರ ಕೈಹಿಡಿಯುವ ಆಶಾಭಾವ ಮೂಡಿದೆ. ಇದರೊಂದಿಗೆ ತೊಗರಿ, ಸಾಮೆ, ಸಜ್ಜೆ, ನವಣೆ, ಅಲಸಂದೆ, ಸಾಸಿವೆ ಮತ್ತಿತರ ಪರ್ಯಾಯ ಬೆಳೆಗಳೂ ಬಿತ್ತನೆಯಾಗುತ್ತಿವೆ. ನಿರೀಕ್ಷೆಯಂತೆ ಮಳೆರಾಯ ಕೃಪೆ ತೋರಿದರೆ ಜಿಲ್ಲೆಯಲ್ಲಿ ಭರ್ಜರಿ ಸಲು ಕಾಣಬಹುದು ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ನೀಲಗಿರಿ ತೆರವೂ ಕಾರಣ: ನಾಲ್ಕು ವರ್ಷದಿಂದ ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿರುವ ನೀಲಗಿರಿ ತೆರವು ಕೃಷಿ ಚಟುವಟಿಕೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡ ಅವರು ಆರಂಭಿಸಿದ್ದ ನೀಲಗಿರಿ ತೆರವು ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ರೈತರಲ್ಲಿ ನೀಲಗಿರಿ ತೆರವು ಬಗ್ಗೆ ಜಿಲ್ಲಾಡಳಿತದ ಅರಿವು ಕಾರ್ಯಕ್ರಮಗಳು ಲಕೊಟ್ಟಿವೆ. ಸಾಕಷ್ಟು ರೈತರು ಸ್ವ ಪ್ರೇರಣೆಯಿಂದ ನೀಲಗಿರಿ ತೆರವುಗೊಳಿಸಿದ್ದು, ಅದೇ ಜಮೀನಿನಲ್ಲಿ ರಾಗಿ, ಜೋಳ ಬೆಳೆಯಲು ಮುಂದಾಗುತ್ತಿದ್ದಾರೆ. ಇದು ಬಿತ್ತನೆ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜುಲೈನಲ್ಲಿ ಬಿತ್ತನೆ ಆರಂಭವಾಗುತ್ತದೆ, ರಾಗಿ ಪ್ರಧಾನ ಬೆಳೆಯಾಗಿದೆ. ಇದರೊಂದಿಗೆ ಜೋಳ ಬೆಳೆಯಲೂ ರೈತರು ಆಸಕ್ತಿ ತೋರುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲ ಅನುಕೂಲಗಳು ಇಲಾಖೆಯಿಂದ ಲಭ್ಯವಿದೆ, ಈ ಬಗ್ಗೆ ಈಗಾಗಲೇ ರೈತರಲ್ಲಿ ಅರಿವು ಮೂಡಿಸಲಾಗಿದೆ. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.
| ಜಯಸ್ವಾಮಿ ಜಂಟಿ ನಿರ್ದೇಶಕ ಕೃಷಿ ಇಲಾಖೆ
4-5 ವರ್ಷಕ್ಕೆ ಹೋಲಿಸಿದರೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಇದೆ. ಇದಕ್ಕೆ ಪೂರಕ ವಾತಾವರಣವಿದೆ. ರೈತರಿಗೆ ಅಗತ್ಯವಿರುವ ರಸಗೊಬ್ಬರ, ಬಿತ್ತನೆಬೀಜ, ಕೃಷಿ ಉಪಕರಣಗಳನ್ನು ಕೃಷಿ ಇಲಾಖೆ ವ್ಯವಸ್ಥೆ ಮಾಡಿದೆ.
| ವಿನುತಾ ಉಪನಿರ್ದೇಶಕಿ ಕೃಷಿ ಇಲಾಖೆ ಬೆಂ.ಗ್ರಾಮಾಂತರ