ಬೆಂಗಳೂರು ಗ್ರಾಮಾಂತರ: ಪಕ್ಷದ ತತ್ವಸಿದ್ಧಾಂತ ಮೆಚ್ಚಿ ಬರುವವರಿಗೆ ಪಕ್ಷಕ್ಕೆ ಯಾವಾಗಲೂ ಸ್ವಾಗತವಿರುತ್ತದೆ. ಅಭಿವೃದ್ಧಿ ಮಂತ್ರದೊಂದಿಗೆ ಪ್ರಾಮಾಣಿಕವಾಗಿ ದುಡಿಯುವವರಿಗೆ ಪಕ್ಷ ಯಾವಾಗಲೂ ರತ್ನಗಂಬಳಿ ಹಾಸುತ್ತದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಗರುಡಾಚಾರ್ಪಾಳ್ಯದ ಸಚಿವರ ಗೃಹಕಚೇರಿ ಬಳಿ ಗುರುವಾರ ವಿವಿಧ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಪಕ್ಷದಲ್ಲಿ ಹೊಸಬರು, ಹಳಬರು ಎಂಬ ಭೇದವಿರಬಾರದು. ಯಾವುದೇ ಭಿನ್ನಾಭಿಪ್ರಾಯವಿದ್ದರೂ ಎಲ್ಲವನ್ನೂ ಬದಿಗೊತ್ತಿ ತಳಮಟ್ಟದಿಂದ ಪಕ್ಷ ಸಂಟನೆಗೆ ಕಾರ್ಯಕರ್ತರು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಕಾರ್ಯಕರ್ತರು ಸರ್ಕಾರ ಜಾರಿಗೊಳಿಸಿದ ಯೋಜನೆಗಳು ಸಮರ್ಪಕವಾಗಿ ಲಾನುಭವಿಗಳಿಗೆ ತಲುಪುವಂತೆ ಮಾಡಬೇಕು. ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತಾವಧಿಯಲ್ಲಿ ರೂಪುಗೊಂಡ ಯೋಜನೆಗಳು, ಅವುಗಳ ಅನುಷ್ಠಾನದ ಬಗ್ಗೆ ಈಗಾಗಲೇ ವಿಶೇಷವಾಗಿ ಕರಪತ್ರ ಮುದ್ರಿಸಿ ಜನರಿಗೆ ತಲುಪಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಕಾರ್ಯರ್ತರು ಇದನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದರು.
ಅಭಿವೃದ್ಧಿಗಾಗಿ ಸೇರ್ಪಡೆ: ಹೊಸಕೋಟೆಯ ಸಮಗ್ರ ಅಭಿವೃದ್ಧಿ ದೃಷ್ಟಿ, ಪಕ್ಷದ ತತ್ವಸಿದ್ಧಾಂತ ಹಾಗೂ ಸಚಿವರ ಕಾರ್ಯ ವೈಖರಿಯನ್ನು ಮೆಚ್ಚಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ. ಪಕ್ಷದ ತತ್ವಸಿದ್ಧಾಂತಕ್ಕೆ ಬದ್ಧನಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಮುಖಂಡ ಕೆಇಬಿ ಮಹೇಶ್ ಹೇಳಿದರು.
ಕೈನಿಂದ ಕಮಲಕ್ಕೆ: ಮುಖಂಡರಾದ ರವಿ ಹಾಗೂ ರಮೇಶ್ ನೇತೃತ್ವದಲ್ಲಿ ಸೂಲಿಬೆಲೆಯ ಅಂಬೇಡ್ಕರ್ ಕಾಲನಿಯ ಯುವಕರಾದ ಪವನ್, ದನಿಲ್, ಮಂಜುನಾಥ್, ಸೂರಿ, ನರಸಿಂಹಮೂರ್ತಿ, ಪ್ರಭು, ಮಹೇಶ, ನರಸಿಂಹ ಮೂರ್ತಿ, ಅಪ್ಪಯ್ಯ, ದರ್ಶನ್ ಮತ್ತಿತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.