ಸರಗೂರು: ಕಸುಬಿಗೆ ತಕ್ಕಂತೆ ಪೇಟೆ, ಪಂಥಗಳಿಗೆ ತಕ್ಕಂತೆ ಗುಡಿಗೋಪುರ, ವಸತಿಗೆ ತಕ್ಕಂತೆ ಕೆರೆ ಕುಂಟೆಗಳನ್ನು ನಿರ್ಮಿಸಿ ಮಾದರಿ ನಗರ ನಿರ್ಮಾಣಕ್ಕೆ ಕಾರಣರಾದ ನಾಡಪ್ರಭು ಕೆಂಪೇಗೌಡರ ಜಾತ್ಯತೀತ ಮನೋಭಾವವನ್ನು ಎಲ್ಲರೂ ಸ್ಮರಿಸುವಂತಹದ್ದು ಎಂದು ತಹಸೀಲ್ದಾರ್ ಮೋಹನಕುಮಾರಿ ಬಣ್ಣಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕೆಂಪೇಗೌಡ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರು ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿದರು. ಎಲ್ಲ ಸಮುದಾಯದವರು ಸಹಬಾಳ್ವೆಯಿಂದ ಜೀವನ ನಡೆಸುವಂತೆ ಮಾಡಿದರು. ಧಾರ್ಮಿಕ, ಸಾಂಸ್ಕೃತಿಕ, ಜಾನಪದ ಕಲೆಗಳ ಬೆಳವಣಿಗೆ ಜತೆಗೆ ಎಲ್ಲ ಸಮುದಾಯದವರಿಗೆ ಅಧಿಕಾರ, ಶಿಕ್ಷಣ, ಸವಲತ್ತನ್ನು ಕೆಂಪೇಗೌಡರು ನೀಡಿದ್ದರು ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಗ್ರಾಪಂ ಸದಸ್ಯ ಮಾಜಿ ಅಧ್ಯಕ್ಷ ಸುಧೀರ್ ಮಾತನಾಡಿ, ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯುಳ್ಳ ಆಡಳಿತಗಾರನಾಗಿದ್ದು, ಕೆರೆಗಳ ನಿರ್ಮಾಣಗಳ ಮೂಲಕ ಕೃಷಿ ಅಭಿವೃದ್ಧಿ ಹಾಗೂ ಅಂತರ್ಜಲದ ವೃದ್ಧಿಗೆ ಶ್ರಮಿಸಿದರು. ಪ್ರಕೃತಿ ಸಮತೋಲನ, ನಿಸರ್ಗ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಹೇಳಿದರು.
ಮುಖ್ಯ ಭಾಷಣಕಾರರಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಲಪ್ಪ ಮಾತನಾಡಿ, ನಾಡು ಕಟ್ಟುವಲ್ಲಿ ಕೆಂಪೇಗೌಡ ಪ್ರಮುಖ ಪಾತ್ರ ವಹಿಸಿದ್ದರು. ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ನಗರ ನಿರ್ಮಾಣವಾಯಿತು. ಬೆಂಗಳೂರಿನ ಕೆರೆ ಕಟ್ಟೆಗಳನ್ನೂ ಅವರು ಅಭಿವೃದ್ಧಿಗೊಳಿಸಿ ಮಾದರಿಯಾಗಿದ್ದಾರೆ ಎಂದರು.
ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ಪಪಂ ಸದಸ್ಯ ಶ್ರೀನಿವಾಸ, ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಸರಗೂರು ಶಿವಣ್ಣ, ಲಯನ್ಸ್ ಅಕಾಡೆಮಿ ಶಾಲೆಯ ಶಿಕ್ಷಕ ಸುನೀಲ್, ಗ್ರಾಪಂ ಸದಸ್ಯ ಗಂಗಾಧರ್, ಶಿವಕುಮಾರ್, ಜ್ಯೋತಿ ರಮೇಶ್, ಗ್ರಾಪಂ ಮಾಜಿ ಸದಸ್ಯ ಶಿವರಾಜು, ಆಶೋಕ್ ಕುಮಾರ್, ಡಾ.ಆಶೋಕ್, ನಿರ್ದೇಶಕರು ಸಿ, ಕಾಳಪ್ಪ, ಬಿಸಿ ರವಿ, ಶಿವಲಿಂಗೇಗೌಡ, ಭವನೇಶ್, ಇಒ ಪ್ರೇಮ್ ಕುಮಾರ್, ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಸಾಗರೆ ಮಹೇಂದ್ರ, ಎಸ್ಸಿ-ಎಸ್ಟಿ ಸಮಿತಿ ಸದಸ್ಯ ಬೆಟ್ಟ ಸ್ವಾಮಿ, ಜಯರಾಂ, ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ನಾರಾಯಣ್, ಬಿ ಕೆ ಶಿವರಾಜು, ಸುರೇಶ್, ಕಾಳಿಹುಂಡಿ ನಾಗೇಂದ್ರ, ವೆಂಕಟೇಶ್,ಬಿ ಎನ್ ಗಂಗಾಧರ, ಬಿ ಟಿ ರವಿ, ರೈತ ಸಂಘದ ಕುಮಾರ್ ಗೌಡ, ಮಾದೇಗೌಡ, ಮಹೇಶ್,ರವಿ, ರವಿಂದ್ರ, ಮನೋಹರ್, ಮಹದೇವ ಮೂರ್ತಿ, ರವಿಚಂದ್ರನ್ ಮುಜೀಬ್ ಇತರರು ಇದ್ದರು.