ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಅ.1ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ದಸರಾ ರಜೆ ಹಿನ್ನೆಲೆ, ಶುಕ್ರವಾರದಿಂದ ಅಧಿಕೃತವಾಗಿ ಚಾಲನೆ ದೊರೆತಿದೆ.
ಶುಕ್ರವಾರ ನಗರದ ಡಿಸಿ ಕಚೇರಿಯ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಸಂಬಂಧ ಕರೆಯಲಾಗಿದ್ದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಖರೀದಿ ಕಾರ್ಯಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಪ್ರತೀ ಕ್ವಿಂಟಲ್ ರಾಗಿಗೆ 4,886 ರೂ. ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದ್ದು, 2025ರ ಅ.1 ರಿಂದ ಡಿ.15ರ ವರೆಗೆ ನೊಂದಣಿ ಕಾರ್ಯ ಕೈಗೊಳ್ಳಲಾಗುತ್ತದೆ. ಜತೆಗೆ ಮುಂಬರುವ ಜ.1ರಿಂದ ಮಾ.31ರ ವರೆಗೆ ರಾಗಿ ಖರೀದಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಮೂಲಸೌಲಭ್ಯ ಒದಗಿಸಲು ಸೂಚನೆ:
ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರ, ದಕ್ಷಿಣ ತಾಲೂಕಿನ ಕೆಂಗೇರಿ, ಯಲಹಂಕ ಹಾಗೂ ಆನೇಕಲ್ ತಾಲೂಕಿನಲ್ಲಿ ರಾಗಿ ಖರೀದಿ ಕೇಂದ್ರ ಮತ್ತು ರಾಗಿ ನೊಂದಣಿ ಕೇಂದ್ರವನ್ನು ತೆರೆಯಲು ಅನುಮತಿ ನೀಡಲಾಗಿದೆ. ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ನೊಂದಣಿ ಮತ್ತು ಖರೀದಿ ಪ್ರಕ್ರಿಯೆ ಮುಗಿಯುವವರೆಗೂ ಅಗತ್ಯ ಮೂಲಸೌಲಭ್ಯಗಳಾದ ಕುಡಿಯುವ ನೀರು, ಶಾಮಿಯಾನ, ಚೇರ್ ಹಾಗೂ ಟೇಬಲ್ಗಳ ವ್ಯವಸ್ಥೆಯನ್ನು ಮಾಡುವಂತೆ ಎಪಿಎಂಸಿ ಅಧಿಕಾರಿಗಳಿಗೆ ಜಿ.ಜಗದೀಶ್ ಸೂಚಿಸಿದರು.