ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಬೀದಿ ಬದಿ ವ್ಯಾಪಾರಿಯ ಮಗಳು 11 ಚಿನ್ನದ ಪದಕ ಹಾಗೂ ಪದವಿ ವಿಭಾಗದಲ್ಲಿ ಆಟೋ ಚಾಲಕನ ಮಗ 6 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಹುಬ್ಬೇರುವಂತೆ ಮಾಡಿದ್ದಾರೆ.
ತನ್ನ ಓದಿಗೆ ಬಡತನ ಅಡ್ಡಿಯಾಗದು ಎಂಬುದನ್ನು ಈ ಮೂಲಕ ಸಾಬೀತುಪಡಿಸಿದ್ದು, ಭವಿಷ್ಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗುವ ಕನಸು ಕಂಡಿದ್ದಾರೆ. ಬುಧವಾರ ನಡೆಯಲಿರುವ ಬೆಂಗಳೂರು ವಿಶ್ವವಿದ್ಯಾಲಯದ 60ನೇ ಘಟಿಕೋತ್ಸವ ಸಮಾರಂಭದಲ್ಲಿ ಈ ವಿದ್ಯಾರ್ಥಿಗಳು ಪದವಿಯನ್ನು ಪಡೆಯಲಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಷಯದಲ್ಲಿ ವ್ಯಾಸಂಗ ಮಾಡಿರುವ ಪ್ರೇಮಾ ಎಸ್. 11 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ತಂದೆಯ ಮಾತಿನಂತೆ ತಾನು ಶಿಕ್ಷಕಿಯಾಗಬೇಕೆಂಬ ಹಂಬಲದಿಂದ ವರ್ಷಾರಂಭದಿಂದಲೇ ಕಷ್ಟಪಟ್ಟು ಅಂದಿನ ಪಾಠವನ್ನು ಅಂದೇ ಓದುತ್ತಿದ್ದೆ. ಹೀಗಾಗಿ, ಹೆಚ್ಚು ಚಿನ್ನದ ಪದಕಗಳನ್ನು ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ ಪ್ರೇಮಾ ಎಸ್.
ಮೂಲತಃ ಗದಗ ಜಿಲ್ಲೆ ರೋಣ ತಾಲ್ಲೂಕಿನ ಜಕಲಿ ಗ್ರಾಮದವರಾಗಿದ್ದು, ತಂದೆ ಶರಣಪ್ಪ ಮುದಿಯಪ್ಪ ಮುಕ್ಕಣ್ಣವರ್ ಹಾಗೂ ತಾಯಿ ಸಾವಿತ್ರಿ ಉದ್ಯೋಗ ಅರಸಿ ಬೆಂಗಳೂರಿಗೆ ವಲಸೆ ಬಂದಿದ್ದಾರೆ. ಪೀಣ್ಯ 2ನೇ ಹಂತದಲ್ಲಿರುವ ರಾಜಗೋಪಾಲ್‌ನಗರದಲ್ಲಿ ನೆಲೆಸಿದ್ದು, ತಂದೆ ಜಾಲಹಳ್ಳಿ ಕ್ರಾಸ್‌ನಲ್ಲಿ ಬೀದಿ ಬದಿ ವಾಚ್ ಮಾರಾಟ ಮಾಡುತ್ತಾರೆ. ತಾಯಿ ಹೋಟೆಲ್‌ಗಳಿಗೆ ಚಪಾತಿ ಮಾಡುತ್ತಾರೆ. ತಮ್ಮ ಐಟಿಐ ವ್ಯಾಸಂಗ ಮಾಡುತ್ತಿದ್ದಾನೆಂದು ಮಾಹಿತಿ ಹಂಚಿಕೊಂಡರು.
ಡಿಪ್ಲೊಮಾ ಲ್ಯಾಟರಲ್ ಎಂಟ್ರಿ ಪಡೆದು ಸಿವಿಲ್ ಇಂಜಿನಿಯರಿಂಗ್ ಪದವಿ ಸೇರಿದ್ದರಿಂದ ಇಂಜಿನಿರಿಂಗ್‌ನಲ್ಲಿ ಹೆಚ್ಚು ಅಂಕ ಪಡೆಯಲು ಅನುಕೂಲವಾಯಿತು. ಡಿಪ್ಲೊಮಾದಲ್ಲಿನ ಜ್ಞಾನವನ್ನೇ ಇಲ್ಲಿಯೂ ಬಳಸಿದ್ದರಿಂದ ಓದು ಅಷ್ಟೇನೂ ಕಷ್ಟ ಎನಿಸಲಿಲ್ಲ. ಡಿಪ್ಲೊಮಾದಲ್ಲಿ 98.65 ಲಿತಾಂಶ ಪಡೆದಿದ್ದೆ ಎನ್ನುತ್ತಾರೆ ಹೇಮಂತ್.
ಮೂಲತಃ ಶಿವಮೊಗ್ಗದವರಾಗಿರುವ ಹೇಮಂತ್, ಡಿಪ್ಲೋಮಾವರೆಗೂ ಶಿವಮೊಗ್ಗದಲ್ಲಿಯೇ ಶಿಕ್ಷಣ ಮುಗಿಸಿ ಇಂಜಿನಿಯರಿಂಗ್ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಆಗಮಿಸಿದರು. ಜ್ಞಾನಭಾರತಿ ಕ್ಯಾಂಪಸ್‌ನಲ್ಲಿನ ಹಾಸ್ಟೆಲ್‌ನಲ್ಲಿದ್ದುಕೊಂಡು ವ್ಯಾಸಂಗ ಮಾಡಿದೆ ಎನ್ನುತ್ತಾರೆ.
ತಂದೆ ಶಿವಮೊಗ್ಗದಲ್ಲಿ ಆಟೋ ಚಾಲಕರಾಗಿ ಜೀವನ ಕಟ್ಟಿಕೊಂಡಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ನಾನು ಸದ್ಯ ಖಾಸಗಿ ಕಂಪನಿಯಲ್ಲಿ ಇಂಜಿನಿಯರಿಂಗ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಿವಿಲ್ ವಿಭಾಗದಲ್ಲಿ ಸರ್ಕಾರಿ ಕೆಲಸಗಳಿಗೆ ಹೆಚ್ಚಿನ ಅವಕಾಶಗಳು ಇರುವುದರಿಂದ ಸರ್ಕಾರಿ ಕೆಲಸ ಪಡೆಯಬೇಕು ಎನ್ನುವುದು ನನ್ನ ಗುರಿಯಾಗಿದೆ ಎನ್ನುತ್ತಾರೆ.