ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಪದವಿ ವಿದ್ಯಾರ್ಥಿಗಳಿಗೆ ‘ಔಟ್‌ಆ್ ಸಿಲಬಸ್’ ಪ್ರಶ್ನೆ ಪತ್ರಿಕೆ ನೀಡಿ ಎಡವಟ್ಟು ಮಾಡಿದ್ದು, ವಿವಿಯು ವಿದ್ಯಾರ್ಥಿಗಳ ಆಕ್ರೋಶಕ್ಕೆ ಮಣಿದು ಕೊನೇ ಕ್ಷಣದಲ್ಲಿ ಪರೀಕ್ಷೆಯನ್ನು ಜ.24ಕ್ಕೆ ಮುಂದೂಡಿದೆ.
ಬೆಂ.ವಿವಿ ಬಿಸಿಎ 5ನೇ ಸೆಮಿಸ್ಟರ್‌ನ ಪರೀಕ್ಷೆ ಶುಕ್ರವಾರ ನಡೆಯಿತು. ಈ ವೇಳೆ ಪದವಿ ವಿದ್ಯಾರ್ಥಿಗಳಿಗೆ ಹೊಸ ಮತ್ತು ಹಳೇ ಪಠ್ಯಕ್ರಮದ ಪ್ರಶ್ನೆ ಪತ್ರಿಕೆಗಳನ್ನು ನೀಡಬೇಕಿತ್ತು. ಈ ವೇಳೆ ‘ಡೇಟಾ ಮೈನಿಂಗ್’ ಪ್ರಶ್ನೆಯ ಪತ್ರಿಕೆಯಲ್ಲಿ ‘ಡೇಟಾ ಅನಾಲಿಟಿಕ್ಸ್’ ಪ್ರಶ್ನೆಗಳನ್ನು ಸೇರಿಸಿ ಕೇಳಲಾಗಿದೆ. ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳು ನೋಡಿ ಗಾಬರಿಯಾಗಿದ್ದಾರೆ. ಆ ನಂತರ ಪರೀಕ್ಷಾ ಮೇಲ್ವಿಚಾರಕರ ಗಮನಕ್ಕೆ ತಂದಿದ್ದು, ಬೆಂ.ವಿವಿ ವಿಷಯ ತಜ್ಞರು ಪ್ರಶ್ನೆ ಪತ್ರಿಕೆಯನ್ನು ತಪ್ಪಾಗಿ ರೂಪಿಸಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬೆಂ.ವಿವಿಯು ಪರೀಕ್ಷೆಯನ್ನು ಜ.24ಕ್ಕೆ ಮುಂದೂಡಿದೆ. ಇದರಿಂದ ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂ.ವಿವಿ ಕುಲಸಚಿವ(ಮೌಲ್ಯಮಾಪನ) ಸಿ.ಶ್ರೀನಿವಾಸ್, ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯ ಹೊರತಾದ ಪ್ರಶ್ನೆಗಳು ಕಂಡು ಬಂದಿರುವುದನ್ನು ವಿದ್ಯಾರ್ಥಿಗಳು ಗಮನಕ್ಕೆ ತಂದಿದ್ದಾರೆ. ತಕ್ಷಣ ಪರೀಕ್ಷೆಯನ್ನು ಮುಂದೂಡಿದ್ದೇವೆ. ಈ ಪ್ರಮಾದಕ್ಕೆ ಕಾರಣರಾದವರ ಮೇಲೂ ಕ್ರಮಕ್ಕೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.