ಜಿಲ್ಲೆ

ಬೆಂಗಳೂರು ಟೆಕ್​ ಶೃಂಗಸಭೆ ನ. 29ರಿಂದ; ವಿವಿಧ ದೇಶದ ಪ್ರತಿನಿಧಿಗಳು ಭಾಗಿ

Bengaluru - General - Rama Kishan K V

ಬೆಂಗಳೂರು: ಏಷ್ಯಾದ ಅತಿದೊಡ್ಡ ಟೆಕ್​ ಸಮಾವೇಶ ಎನಿಸಿದ 'ಬೆಂಗಳೂರು ಟೆಕ್​ ಶೃಂಗಸಭೆ'ಯ 26ನೇ ಆವೃತ್ತಿಯು ನ. 29ರಿಂದ ಮೂರು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ಇದರ ಭಾಗವಾಗಿ ನಗರದ ಖಾಸಗಿ ಹೋಟೆಲ್​ನಲ್ಲಿ ಸೋಮವಾರ ಗ್ಲೋಬಲ್​ ಇನೋವೇಷನ್​ ಅಲಿಯೆನ್ಸ್​ ಪಾಲುದಾರರ ಸಭೆ ನಡೆಯಿತು.

ಗ್ರಾಮೀಣ ಅಭಿವೃದ್ಧಿ, ಪಂಚಾಯತ್​ ರಾಜ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್​ ರ್ಖಗೆ ಮಾತನಾಡಿ, ಹವಾಮಾನ ಬದಲಾವಣೆ, ಆರೋಗ್ಯ ರಕ್ಷಣೆ ಹಾಗೂ ಸೈಬರ್​ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರ ಹೆಚ್ಚು ನಿರತವಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಜಗತ್ತು ಎದುರಿಸುತ್ತಿರುವ ಅನೇಕ ಸವಾಲುಗಳನ್ನು ಪರಿಹರಿಸಲು ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಸಾಧ್ಯವಿದೆ. ಮುಖ್ಯವಾಗಿ ಜನರಿಗೆ ಸಹಕಾರಿಯಾಗುವಂತಹ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕಾಗಿದೆ. ಭವಿಷ್ಯದ ದೃಷ್ಟಿಯಿಂದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚಿನ ಆವಿಷ್ಕಾರಗಳನ್ನು ನಡೆಸಬೇಕಾದ ಅಗತ್ಯವಿದೆ. ಆವಿಷ್ಕಾರಗಳಿಗೆ ರಾಜ್ಯ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡುತ್ತಿದ್ದು, ಕೌಶಲ ಸಲಹಾ ಸಮಿತಿಯನ್ನು ಹೊಂದಿದೆ. ಸೈಬರ್​ ಸೆಕ್ಯುರಿಟಿ, ಡೇಟಾ ಸೈನ್ಸ್​, ಎಐ, ಏರೋಸ್ಪೇಸ್​, ರೋಬಾಟಿಕ್ಸ್​ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚು ಪ್ರಗತಿ ಸಾಧಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ರಾಯಭಾರಿ ಕಚೇರಿ ಪ್ರತಿನಿಧಿಗಳು, ರಾಜ್ಯದ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ. ಏಕ್​ರೂಪ್​ ಕೌರ್​, ಐಟಿ-ಬಿಟಿ ಇಲಾಖೆ ನಿರ್ದೇಶಕ ಎಚ್​.ವಿ. ದರ್ಶನ್​, ಎಂಎಂ ಆ್ಯಕ್ಟಿವ್​ ಸೈ&ಟೆಕ್​ ಕಮ್ಯುನಿಕೇಷನ್ಸ್​ ಕಾರ್ಯಕಾರಿ ಅಧ್ಯಕ್ಷ ಜಗದೀಶ್​ ಪಟಾಣ್​ಕರ್​ ಮತ್ತಿತರರಿದ್ದರು.

ಸಂವಾದ, ಪ್ರದರ್ಶನ

ಬೆಂಗಳೂರು ಟೆಕ್​ ಶೃಂಗಸಭೆಯ 26ನೇ ಆವೃತ್ತಿಯಲ್ಲಿ 200ಕ್ಕೂ ಹೆಚ್ಚು ಜಾಗತಿಕ ತಂತ್ರಜ್ಞಾನ ಸಂಸ್ಥೆಗಳ ಪರಿಣಿತರು ಹಾಗೂ ಗ್ಲೋಬಲ್​ ಇನ್ನೋವೇಶನ್​ ಅಲಯನ್ಸ್​ ಪಾಲುದಾರ ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಅನಿಮೇಷನ್​, ವಿಷುವಲ್​ ಎಫೆಕ್ಟ್ಸ್, ಗೇಮಿಂಗ್​, ಟೆಲಿಕಾಂ, 6ಜಿ, ಬಯೋಟೆಕ್​ ಹಾಗೂ ಹೆಲ್ತ್​ಟೆಕ್​ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿ, ಐಟಿ ಮತ್ತು ಡೀಪ್​ ಟೆಕ್​, ಮೆಟಾವರ್ಸ್​ ಮತ್ತು ವೆಬ್​ 3.0 ಸೇರಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬಗ್ಗೆ ಸಂವಾದ, ಪ್ರದರ್ಶನಗಳು ನಡೆಯಲಿವೆ.