ಸೋಮವಾರಪೇಟೆಯಲ್ಲಿ ನಡೆದ ರಾಷ್ಟ್ರಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ರೈಸಿಂಗ್ ಬುಲ್ಸ್ ಬೆಂಗಳೂರು ತಂಡ ಪ್ರಶಸ್ತಿ ಸ್ವೀಕರಿಸಿತು. ಪದ್ಮನಾಭ, ಸುರೇಶ್, ದೀಪಕ್, ತಮ್ಮಣಿ, ಗಿರೀಶ್ ಇದ್ದರು. 
ಜಿಲ್ಲೆ

ಬೆಂಗಳೂರು ರೈಸಿಂಗ್ ಬುಲ್ಸ್ ಪ್ರಥಮ

ಲೋಕೇಶ್ ಮನು. ಡಿ

ಸೋಮವಾರಪೇಟೆ: ಒಕ್ಕಲಿಗರ ಯುವ ವೇದಿಕೆ, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನಿಂದ ಜಿಎಂಪಿ ಶಾಲಾ ಮೈದಾನದಲ್ಲಿ 3ದಿನ ನಡೆದ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಹೊನಲು ಬೆಳಕಿನ ಪ್ರತಿಷ್ಠಿತ ಒಕ್ಕಲಿಗರ ಕಪ್ ಕಬಡ್ಡಿ ಪ್ರಶಸ್ತಿಯನ್ನು ಬೆಂಗಳೂರು ರೈಸಿಂಗ್ ಬುಲ್ಸ್ ತಂಡ ಮುಡಿಗೇರಿಸಿಕೊಂಡಿತು. ನಗದು 2 ಲಕ್ಷ ರೂ. ಹಾಗೂ ಆಕರ್ಷಕ ಟ್ರೋಫಿ ಪಡೆಯಿತು.

ಜೆ.ಕೆ.ಅಕಾಡೆಮಿ ಕಾಸರಗೋಡು ತಂಡ ದ್ವಿತೀಯ ಸ್ಥಾನ ಪಡೆದು 1 ಲಕ್ಷ ರೂ. ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆಯಿತು. ತೃತೀಯ ಸ್ಥಾನವನ್ನು ಬ್ಯಾಂಕ್ ಆಫ್ ಬರೋಡ, ಚತುರ್ಥ ಸ್ಥಾನವನ್ನು ಬಿಪಿಸಿಎಲ್ ತಂಡ ಪಡೆದು ತಲಾ 50 ಸಾವಿರ ರೂ. ನಗದು ಹಾಗೂ ಟ್ರೋಫಿಗಳನ್ನು ಪಡೆದುಕೊಂಡವು.

ಸೋಮವಾರ ಮುಂಜಾನೆ 3 ಗಂಟೆಗೆ ಪ್ರಾರಂಭವಾದ ರೋಚಕ ಫೈನಲ್‌ನಲ್ಲಿ 28-26 ಅಂಕಗಳ ಅಂತರದಲ್ಲಿ ವಿಜೇತ ತಂಡ ಗೆಲುವು ದಾಖಲಿಸಿತು. ಪ್ರತಿ ಹಂತದಲ್ಲೂ ಸಮಬಲದ ಪ್ರದರ್ಶನ ಕಂಡ ಪಂದ್ಯದಲ್ಲಿ ಹಾವು ಏಣಿಯಾಟದಂತೆ ಅಂಕಗಳು ಸ್ಕೋರ್ ಬೋರ್ಡ್‌ನಲ್ಲಿ ಬರುತ್ತಿತ್ತು. ಶೇ.95 ರಷ್ಟು ಪ್ರೇಕ್ಷಕರು ವಿಜೇತ ತಂಡವನ್ನೇ ಬೆಂಬಲಿಸುತ್ತಿದ್ದರು. ಕೊನೆ ರೈಡ್‌ನಲ್ಲಿ 28-27 ಅಂಕಗಳಲ್ಲಿ ವಿಜೇತ ತಂಡ ಮುಂದಿತ್ತು. ಕಾಸರಗೋಡು ತಂಡದ ಬಲಿಷ್ಠ ರೈಡರ್ ವಿಶ್ವರಾಜ್ ಅವರನ್ನು ಬುಲ್ಸ್ ತಂಡದ ಆಟಗಾರರು ಹಿಡಿಯುವ ಮೂಲಕ ಗೆಲುವಿನ ನಗೆ ಬೀರಿತು.

ಆಶ್ಚರ್ಯವೆಂಬಂತೆ ಅತೀ ಹೆಚ್ಚು ಪ್ರೊ ಕಬಡ್ಡಿ ಆಟಗಾರರು ಇದ್ದ ಬಲಿಷ್ಠ ತಂಡಗಳು ಫೈನಲ್ ಹಂತಕ್ಕೆ ತಲುಪಲಿಲ್ಲ. ಮೊದಲ ಸೆಮಿಫೈನಲ್‌ನಲ್ಲಿ ಜೆ.ಕೆ.ಅಕಾಡೆಮಿ ಕಾಸರಗೋಡು ತಂಡ ಬಿಪಿಸಿಎಲ್ ತಂಡವನ್ನು 31-29 ಅಂಕಗಳ ಅಂತರದಲ್ಲಿ ಸೋಲಿಸಿ ಫೈನಲ್‌ಗೇರಿತ್ತು. 2ನೇ ಸೇಮಿಫೈನಲ್‌ನಲ್ಲಿ ರೈಸಿಂಗ್ ಬುಲ್ಸ್ ತಂಡ ಬ್ಯಾಂಕ್ ಆಫ್ ಬರೋಡ ತಂಡವನ್ನು 29-17 ಅಂತರದಲ್ಲಿ ಸೋಲಿಸಿ ಫೈನಲ್‌ಗೇರಿತು.

ದಾನಿಗಳಾದ ಕಿರಗಂದೂರು ಎ.ಎನ್.ಪದ್ಮನಾಭ, ಯುವ ವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಗೌರವಾಧ್ಯಕ್ಷ ಬಿ.ಜೆ.ದೀಪಕ್, ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬಿ.ಸಿ.ಸುರೇಶ್, ಹಿರಿಯ ಕಬಡ್ಡಿ ಆಟಗಾರ ಮಂಜೂರು ತಮ್ಮಣಿ, ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಎಸಿಎಫ್ ಗಾನಶ್ರೀ, ಯುವ ವೇದಿಕೆಯ ಪದಾಧಿಕಾರಿಗಳು ಇದ್ದರು.

ಬೆಸ್ಟ್ ರೈಡರ್ ಕಾಸರಗೋಡು ತಂಡದ ವಿಶ್ವರಾಜ್, ಬೆಸ್ಟ್ ಡಿಫೆಂಡರ್ ಬುಲ್ಸ್‌ನ ದೀಪಕ್, ಬೆಸ್ಟ್ ಆಲ್‌ರೌಂಡರ್ ಬುಲ್ಸ್‌ನ ಆಶಿಶ್ ಮಲ್ಲಿಕ್, ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಸ್ಟ್ ರೈಡರ್ ಬೆಳೆಗಾವಿ ಜಿಲ್ಲೆಯ ಜೈ ಮಹಾಕಾಳಿ ತಂಡದ ಅಮೂಲ್ಯ ಪಾಟೀಲ್, ಬೆಸ್ಟ್ ಕ್ಯಾಚರ್ ದಕ್ಷಿಣ ಕನ್ನಡ ತಂಡದ ಮಹಾಲಕ್ಷ್ಮೀ ಪಡೆದರು.

ರಾಜ್ಯ ಮಟ್ಟದ ಮಹಿಳಾ ಕಬಡ್ಡಿ ಪ್ರಶಸ್ತಿಯನ್ನು ಬೆಳಗಾವಿ ಜೈ ಮಹಾಕಾಳಿ ತಂಡ ಪಡೆಯಿತು. ದ್ವಿತೀಯ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲಾ ತಂಡ ಪಡೆಯಿತು.

ಭಾನುವಾರ ರಾತ್ರಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕ್ರೀಡೆಗೆ ಅತೀ ಹೆಚ್ಚು ಪ್ರೋತ್ಸಾಹ ನೀಡುವ ಜಿಲ್ಲೆ ಅಂದರೆ ಕೊಡಗು ಎಂದು ಪ್ರಶಂಶೆ ವ್ಯಕ್ತಪಡಿಸಿದರು. ಕ್ರೀಡೆ, ಸೇನೆ ಮತ್ತು ರಾಷ್ಟ್ರೀಯತೆಗೆ ಕೊಡಗಿನ ಜನರ ಕೊಡುಗೆ ಅಪಾರವಾದದು. ಕ್ರೀಡೆ ವಿಷಯದಲ್ಲಿ ಜಾತಿ, ಧರ್ಮ, ಪಕ್ಷ ಎಲ್ಲವನ್ನು ಮರೆತು ಕ್ರೀಡೆಯಲ್ಲಿ ಒಂದಾಗುವ ಮನಸ್ಸುಗಳನ್ನು ಕೊಡಗಿನಲ್ಲಿ ಕಾಣಬಹುದು. ಅಂತಹ ಕೊಡಗನ್ನು ಪ್ರತಿನಿಧಿಸುವ ಭಾಗ್ಯ ನನಗೆ ಸಿಕ್ಕಿರುವುದು ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದರು.

ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಕಬಡ್ಡಿ ಎಂಬುದು ಗ್ರಾಮೀಣ ಕ್ರೀಡೆ. ಗ್ರಾಮೀಣ ಕ್ರೀಡೆಗಳನ್ನು ನಡೆಸುವುದಕ್ಕೆ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಹಾಕಿ, ಕಬಡ್ಡಿ ಆಟ ಕೊಡಗಿನ ಜನರ ರಕ್ತದಲ್ಲಿದೆ. ಗ್ರಾಮೀಣ ಅಪ್ಪಟ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದಲ್ಲಿ ಗ್ರಾಮೀಣ ಕ್ರೀಡಾಕೂಟ ಹೆಚ್ಚು ಹೆಚ್ಚು ನಡೆಯಬೇಕು ಎಂದು ಆಶಿಸಿದರು.

ಜೆಡಿಎಸ್ ಮುಖಂಡ ನಿಖಿಲ್ ಕುಮಾರ ಸ್ವಾಮಿ ಮಾತನಾಡಿ, ಶಿಸ್ತಿಗೆ ಹೆಸರಾದ ಯೋಧ ನಾಡಿನಲ್ಲಿ ಮಾತ್ರ ಇಂತಹ ದೊಡ್ಡಮಟ್ಟದ ಕ್ರೀಡಾಕೂಟಗಳು ನಡೆಯಲು ಸಾಧ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಹುಣಸೂರು ಶಾಸಕ ಹರೀಶ್‌ಗೌಡ ಮಾತನಾಡಿ, ಕ್ರೀಡಾ ಪ್ರೇಮಿಗಳಿಗಾಗಿ ಪ್ರತಿ ವರ್ಷ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಲೇ ಬೇಕು. ನಾವುಗಳು ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.

ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಹಾಸನ ಶಾಖ ಮಠದ ಶ್ರೀಶಂಭುನಾಥ ಸ್ವಾಮೀಜಿ ಆಶೀರ್ವಾಚನ ನೀಡಿದರು. ವೇದಿಕೆಯಲ್ಲಿ ದಾನಿಗಳಾದ ಹರಪಳ್ಳಿ ರವೀಂದ್ರ, ಹಿರಿಯ ವಕೀಲ ಚಂದ್ರಮೌಳಿ, ವಿ.ಎಂ.ವಿಜಯ ಮತ್ತಿತರ ಗಣ್ಯರು ಇದ್ದರು.

ಯುವ ವೇದಿಕೆಯ ಪದಾಧಿಕಾರಿಗಳು, ತೀರ್ಪುಗಾರರು, ದಾನಿಗಳು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.