ಜಿಲ್ಲೆ

ಗ್ರಾಮಾಂತರ ಇನ್ನುಂದೆ ಬೆಂಗಳೂರು ಉತ್ತರ

ಶಿವರಾಜ.ಎಂ

 ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ಕಳೆದ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಜಿಲ್ಲಾಡಳಿತಭವನದ ಕೊಡುಗೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಈ ಬಾರಿ ಬೆಂಗಳೂರು ಉತ್ತರ ಜಿಲ್ಲೆ ಎಂಬ ನಾಮಕರಣ ಮೂಲಕ ಕಾಂಗ್ರೆಸ್ ಸರ್ಕಾರದ ಈ ಸಾಧನೆ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಹೆಸರು ಬದಲಾವಣೆ ೋಷಣೆಯಾದ ಬಳಿಕ ಈ ಬಗ್ಗೆ ಪರ ವಿರೋಧದ ಚರ್ಚೆಗಳು ಹುಟ್ಟಿಕೊಂಡಿವೆ. ಇದೊಂದು ರಾಜಕೀಯ ಪ್ರಹಸನ, ಹೆಸರು ಬದಲಾವಣೆಯಿಂದ ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ ಗ್ರಾಮಾಂತರ ಎನ್ನುವುದು ಈ ಭಾಗದ ಹಳ್ಳಿ ಪರಂಪರೆ, ಕೃಷಿ ಆಧಾರಿತ ಬದುಕು ಮತ್ತು ಹಿತಾಸಕ್ತಿಗಳ ಪ್ರತಿಬಿಂಬವಾಗಿದೆ. ಈ ಹೆಸರನ್ನು ಉತ್ತರ ಎಂದು ಬದಲಾಯಿಸುವುದು ಇಲ್ಲಿ ಜೀವನ ನಡೆಸುತ್ತಿರುವ ರೈತರು, ಗ್ರಾಮಸ್ಥರ ಭಾವನೆಗಳಿಗೆ ವಿರುದ್ಧವಾಗಿದೆ ಎಂಬ ಅಪಸ್ಪರ ಕೇಳಿಬರುತ್ತಿದೆ. ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ಜಿಲ್ಲೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ವಿಭಾಗಗಳಲ್ಲಿ ಸೇರ್ಪಡೆಯಾಗುವುದರಿಂದ ಜಿಲ್ಲೆಗೆ ನಗರದ ಖದರ್ ಬರಲಿದೆ. ಬೆಂಗಳೂರಿನಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗುತ್ತದೆ. ಬಿಬಿಎಂಪಿ ಮಾದರಿಯಲ್ಲಿ ಸಕಲ ಸೌಕರ್ಯವೂ ಲಭ್ಯವಾಗಲಿಗೆ ಭವಿಷ್ಯದಲ್ಲಿ ಸರ್ಕಾರದ ಅನುದಾನ ಸೇರಿ ದೊಡ್ಡಮಟ್ಟದ ಹೂಡಿಕೆದಾರರು ರಂಗಪ್ರವೇಶ ಮಾಡಲಿದ್ದಾರೆ ಎಂಬ ವಾದವೂ ಕೇಳಿಬರುತ್ತಿದೆ.

ರಾಮನಗರದ ಬಳಿಕ ಗ್ರಾಮಾಂತರ: ರಾಮನಗರ ಜಿಲ್ಲೆಗೆ ದಕ್ಷಿಣದ ಹೆಸರು ನಾಮಕರಣವಾದ ಬಳಿಕ ಗ್ರಾಮಾಂತರ ಜಿಲ್ಲೆಗೆ ಉತ್ತರ ಹೆಸರು ನಾಮಕರಣ ಮಾಡುವ ಸಂಬಂಧ ಸುದ್ದಿ ಹಬ್ಬಿತ್ತು. ಇದೀಗ ಸಂಪುಟ ಸಭೆಯಲ್ಲಿ ತಿರ್ಮಾನದ ಬಳಿಕ ನಗರದೊಂದಿಗೆ ಜಿಲ್ಲೆಯ ಹೆಸರು ಜೋಡಿಸಲ್ಪಟ್ಟಿದೆ.

ಬೆಂಗಳೂರಿನ ಸ್ಥಾನಮಾನ: ವಿಶ್ವ ಭೂಪಟದಲ್ಲಿ ಬೆಂಗಳೂರು ಸ್ಥಾನ ಪಡೆದ ನಗರವಾಗಿದೆ, ಬೆಂಗಳೂರಿಗೆ ಹೊಂದಿಕೊಂಡಂತೆ ನೆಲಮಂಗಲ, ಅತ್ತ ಕಡೆ ಹೊಸಕೋಟೆ, ದೇವನಹಳ್ಳಿ ವಿಮಾನ ನಿಲ್ದಾಣ ಹಾಗೂ ರಾಜಾನುಕುಂಟೆವರೆಗೆ ದೊಡ್ಡಬಳ್ಳಾಪುರ ತಾಲೂಕುಗಳಿದ್ದು ಕೈಗಾರಿಕಾ ಪ್ರದೇಶಗಳಾಗಿ ರೂಪುಗೊಂಡಿವೆ, ಹಲವು ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿ ನೆಲೆ ಕಂಡುಕೊಂಡಿವೆ. ಹೆಸರು ಬದಲಾವಣೆ ಮಾಡಿದರೆ, ಇಲ್ಲಿನ ಭೂಮಿಗೆ ಬೇಡಿಕೆ ಹೆಚ್ಚಲಿದೆ ಕಂಪನಿಗಳು ಬೆಂಗಳೂರು ವ್ಯಾಪ್ತಿ ಎನ್ನುವ ಕಾರಣಕ್ಕೆ ಮತ್ತಷ್ಟು ಹೂಡಿಕೆಗೆ ಮುಂದೆ ಬರುತ್ತವೆ ಎಂಬ ವಾದ ಕೇಳಿಬರುತ್ತಿದೆ.

ಜಿಲ್ಲಾ ಕೇಂದ್ರವಿಲ್ಲ: ಗ್ರಾಮಾಂತರ ಜಿಲ್ಲೆಗೆ ಜಿಲ್ಲಾ ಕೇಂದ್ರವಿಲ್ಲ ಎಂಬ ಕೂಗು ದಶಕಗಳಿಂದಲೂ ಕೇಳಿಬರುತ್ತಿದೆ, ಏತನ್ಮಧ್ಯೆ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ನಡುವೆ ಜಿಲ್ಲಾ ಕೇಂದ್ರದ ಹಗ್ಗಾಜಗ್ಗಾಟ ನಡೆಯುತ್ತಿದೆ. ಇದರ ನಡುವೆ ಬೆಂಗಳೂರು ಉತ್ತರ ಜಿಲ್ಲೆಯಾದರೆ ಜಿಲ್ಲಾ ಕೇಂದ್ರದ ಪ್ರಮೆಯವೇ ಬರುವುದಿಲ್ಲ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪಾಲಿಕೆ ಆಡಳಿತ ಬರುವುದರಿಂದ ಜಿಲ್ಲಾ ಕೇಂದ್ರದ ಪ್ರಸ್ತಾವನೆಗೆ ನನೆಗುದಿಗೆ ಬೀಳಲಿದೆ ಎಂಬ ಮಾತು ಕೇಳಿಬರುತ್ತಿದೆ.

ಹೂಡಿಕೆದಾರಿಗೆ ರತ್ನಗಂಬಳಿ: ಪ್ರಸ್ತುತ ಗ್ರಾಮಾಂತರ ಜಿಲ್ಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿ ಬಿಸಿನೆಸ್ ಪಾರ್ಕ್ ಮತ್ತು ಫಾಕ್ಸ್‌ಕಾನ್‌ನ ಐಫೋನ್‌ನಂತ ಪ್ರಮುಖ ಕೈಗಾರಿಕೆಗಳಿವೆ, ಇಂತಹ ದೊಡ್ಡ ದೊಡ್ಡ ಕೈಗಾರಿಕೆಗಳು ಜಿಲ್ಲೆಯಲ್ಲಿದ್ದರೂ ಹೂಡಿಕೆದಾರಿಗೆ ಬೆಂಗಳೂರು ‘ಗ್ರಾಮೀಣ’ ಎಂಬ ಹೆಸರು ತಕ್ಕಮಟ್ಟಿಗೆ ಹಿಂಜರಿಯುವಂತೆ ಮಾಡಿತ್ತು. ಇದರಿಂದ ಜಿಲ್ಲೆಯ ಹೆಸರು ಬದಲಾವಣೆ ಪ್ರಸ್ತಾಪ ನಡೆಯುತ್ತಿತ್ತು ಹೆಸರು ಬದಲಾವಣೆಯಿಂದ ಹೂಡಿಕೆದಾರರಿಗೆ ರತ್ನಗಂಬಳಿ ಹಾಸಿದಂತಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

1986 ಜಿಲ್ಲೆಯಾದ ಗ್ರಾಮಾಂತರ: 1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೆಕಗೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿ ರೂಪುಗೊಂಡಿತು. ಆರಂಭದಲ್ಲಿ ರಾಮನಗರ ಜಿಲ್ಲೆ ಕೂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೇರಿಕೊಂಡಿತ್ತು. ಆದರೆ 2007ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ರಾಮನಗರವನ್ನು ಪ್ರತ್ಯೆಕ ಜಿಲ್ಲೆಯಾಗಿ ಘೋಷಣೆ ಮಾಡಿದ ಬಳಿಕ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕುಗಳು ಗ್ರಾಮಾಂತರ ಜಿಲ್ಲೆಯಲ್ಲಿ ಉಳಿದುಕೊಂಡವು.

ಹಿಂದೆಯೇ ಪ್ರಸ್ತಾವನೆ ಸಲ್ಲಿಕೆಯಾಗಿತ್ತು: ಪ್ರತ್ಯೆಕ ಜಿಲ್ಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಜಿಲ್ಲಾಧಿಕಾರಿ ಕಚೇರಿ ಸೇರಿ ಎಲ್ಲ ಇಲಾಖೆಗಳು ಬೆಂಗಳೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ನಂತರದಲ್ಲಿ ದೇವನಹಳ್ಳಿಯ ವಿಶ್ವನಾಥಪುರದಲ್ಲಿ ನೂತನವಾಗಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾದ ಬಳಿಕ ಜಿಲ್ಲಾಡಳಿತ ಸಂಪೂರ್ಣವಾಗಿ ಬೆಂಗಳೂರು ನಗರದಿಂದ ಸ್ಥಳಾಂತರಗೊಂಡಿತ್ತು. ಪ್ರತ್ಯೆಕ ಜಿಲ್ಲೆಯಾಗಿ ಆಡಳಿತ ಶುರು ಮಾಡಲು ಆರಂಭವಾದ ದಿನದಿಂದಲೇ ಜಿಲ್ಲಾ ಕೇಂದ್ರಕ್ಕೆ ನೂತನ ಹೆಸರಿಡುವ ಕುರಿತು ಅಂದಿನ ಜಿಲ್ಲಾ ಪಂಚಾಯಿತಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಜಿಲ್ಲೆಯ ಸಂಕ್ಷಿಪ್ತ ನೋಟ: 1986 ರಲ್ಲಿ ಬೆಂಗಳೂರು ನಗರದಿಂದ ವಿಭಜನೆಗೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆ ರೂಪುಗೊಂಡಿತು. ಗ್ರಾಮಾಂತರ ರಾಜ್ಯದ ಪೂರ್ವೊತ್ತರ ಮತ್ತು ಪಶ್ಚಿಮೋತ್ತರ ಆಗ್ನೇಯ ದಿಕ್ಕಿನಲ್ಲಿ ವ್ಯಾಪಿಸಿದೆ. ಭೂಮಿಯ ಮೇಲ್ಮೈ ಸಮುದ್ರ ಮಟ್ಟದಿಂದ 629 ರಿಂದ 950 ಮೀಟರ್‌ವ್ಯತ್ಯಾಸದ ಎತ್ತರದಲ್ಲಿರುತ್ತದೆ. ಈ ಜಿಲ್ಲೆಗೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳು ಸೇರಿರುತ್ತವೆ. ಈ ಜಿಲ್ಲೆಯ ಉತ್ತರ ದಿಕ್ಕಿನಲ್ಲಿ ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳು, ದಕ್ಷಿಣ ದಿಕ್ಕಿನಲ್ಲಿ ಬೆಂಗಳೂರು ನಗರ, ಪೂರ್ವ ದಿಕ್ಕಿನಲ್ಲಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಾಗು ಪಶ್ಚಿಮ ದಿಕ್ಕಿನಲ್ಲಿ ತುಮಕೂರು ಮತ್ತು ರಾಮನಗರ ಜಿಲ್ಲೆಗಳಿವೆ. ಜಿಲ್ಲೆಯ ಭೂ ವಿಸ್ತಾರವು 2298 ಚ.ಕೀ.ಮೀಗಳಿದ್ದು, ರಾಜ್ಯದ ವಿಸ್ತೀರ್ಣದಲ್ಲಿ ಶೇ 1.19 ಪ್ರದೇಶ ಹೊಂದಿರುತ್ತದೆ. ಈ ಜಿಲ್ಲೆಯಲ್ಲಿ ಪಿನಾಕಿನಿ, ಅರ್ಕಾವತಿ ನದಿಗಳು ಹರಿಯುತ್ತವೆ. ರೇಷ್ಮೆ, ಹಾಲು, ಹೂವು, ತರಕಾರಿ ಮತ್ತು ಕೈಮಗ್ಗದ ಚಟುವಟಿಕೆಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪ್ರಸಿದ್ಧವಾಗಿದೆ.ಇಲ್ಲಿನ ಪ್ರಮುಖ ಆಹಾರ ಧಾನ್ಯ ರಾಗಿ. ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯಸ್ವಾಮಿ ದೇವಸ್ಥಾನ, ನೆಲಮಂಗಲ ಶಿವಗಂಗೆ ಬೆಟ್ಟ ಮತ್ತು ವಿಜಯ ವಿಠ್ಠಲ ದೇವಸ್ಥಾನ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಧುರೆಯ ಶ್ರೀ ಶನಿಮಹಾತ್ಮ ದೇವಸ್ಥಾನ, ದೇವನಹಳ್ಳಿ ಟಿಪ್ಪುವಿನ ಜನ್ಮ ಸ್ಥಳ ಕೋಟೆ. ತ್ಯಾಮಗೊಂಡ್ಲು ಹೋಬಳಿಯಲ್ಲಿ ಗಂಗರ ರಾಜಧಾನಿ ಮಣ್ಣೆ. ವೇಣುಗೋಪಾಲಸ್ವಾಮಿ ದೇವಾಲಯ ಜಿಲ್ಲೆಗೆ ಐತಿಹಾಸಿನ ನೆಲೆಗಟ್ಟು ನೀಡಿದೆ.