ಜಿಲ್ಲೆ

ಬೆಂ-ಮೈ ಹೆದ್ದಾರಿಯಲ್ಲಿ ಎಂಟು ಸಲ ಪಲ್ಟಿಯಾದ ಕಾರು: ಸೀಟ್ ಬೆಲ್ಟ್ ಹಾಕಿದ್ದಕ್ಕೆ ಉಳಿದ ಎರಡು ಅಮೂಲ್ಯ ಜೀವ

ಕೆ.ಎನ್.ರಾಘವೇಂದ್ರ

ಮದ್ದೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳು ಸಂಭವಿಸದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ಬೆಂಗಳೂರಿನ ಆರ್.ಟಿ.ನಗರ ನಿವಾಸಿ ವಿನೋದ್(46) ಹಾಗೂ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾದವರು. ವಿನೋದ್ ಜ್ಯುವೆಲ್ಲರಿ ಶಾಪ್ ಮಾಲೀಕರಾಗಿದ್ದು, ಚಾಮರಾಜನಗರದ ಕನಕಗಿರಿ ಮಠಕ್ಕೆ ತೆರಳಿ ಪೀಠಾಧಿಪತಿಗಳ ಆಶೀರ್ವಾದ ಪಡೆದು ನಂತರ ಬೆಂಗಳೂರಿನ ಕಡೆಗೆ ಮಹೇಂದ್ರ ಎಕ್ಸ್.ಯು.ವಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಕಾರು ಮದ್ದೂರಿನ ಫ್ಲೈ ಓವರ್ ಇಳಿಯುತ್ತಿದ್ದಂತೆ ಕಾರಿನ ಮುಂಭಾಗದ ಎಡಭಾಗದ ಟೈಯರ್ ಸ್ಪೋಟಗೊಂಡು ಅಂದಾಜು 8 ಸಲ ಪಲ್ಟಿ ಹೊಡೆದು ಡಿವೈಡರ್‌ಗೆ ಗುದ್ದಿ ಸಂಪೂರ್ಣವಾಗಿ ಜಖಂ ಗೊಂಡಿದೆ. ಅಪಘಾತದ ತೀವ್ರತೆಗೆ ಕಾರಿನ ವಿವಿಧ ಭಾಗಗಳ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ತಕ್ಷಣವೇ ಹೆದ್ದಾರಿಯ ವಾಹನ ಸವಾರರು ಹಾಗೂ ಸ್ಥಳೀಯರು ಧಾವಿಸಿ ಕಾರಿನಲ್ಲಿದ್ದವರನ್ನು ಹೊರಗೆಳೆದು ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಮದ್ದೂರು ಸಂಚಾರ ಪೋಲೀಸ್ ಠಾಣೆಯ ಎಸ್‌ಐ ಜೆ.ಇ.ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ತಪ್ಪದೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಂದು ನಡೆದಿರುವ ಭೀಕರ ಅಪಘಾತದಲ್ಲಿ ಸೀಟ್ ಬೆಲ್ಟ್ ಹಾಕಿರುವ ಪರಿಣಾಮ ಪ್ರಯಾಣಿಕರಿಗೆ ಯಾವುದೇ ರೀತಿಯ ಸಣ್ಣ ಪುಟ್ಟ ಗಾಯಗಳಾಗಿಲ್ಲ ಎಂದು ಸಲಹೆ ನೀಡಿದರು.