ಜಿಲ್ಲೆ

ಬೆಂ-ಮೈ ಹೆದ್ದಾರಿಯಲ್ಲಿ 100 ಕಿ.ಮೀ ವೇಗ ದಾಟಿದರೆ ದಂಡ: ಪರಿಶೀಲಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಯಲ್ಲಿ ಅಪಘಾತ ಸಂಖ್ಯೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಅದರಂತೆ ಪ್ರತಿ ಗಂಟೆಗೆ 100 ಕಿ.ಮೀಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳಿಗೆ ದಂಡ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ನಿಯಮ ಮೀರುವ ವಾಹನಕ್ಕೆ ದಂಡ ಹಾಕುವ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಮೊದಲ ದಿನವೇ ಕೇವಲ ಒಂದು ಗಂಟೆ ಅವಧಿಯಲ್ಲಿ 13 ವಾಹನಗಳಿಗೆ ದಂಡ ವಿಧಿಸಲಾಯಿತು. ಇನ್ನು ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೆದ್ದಾರಿಯಲ್ಲಿ ನಿಂತು ಅತಿ ವೇಗವಾಗಿ ಸಂಚರಿಸುವ ವಾಹನಗಳ ಸಮೀಕ್ಷೆ ನಡೆಸಿ ದಂಡ ವಿಧಿಸಿದರು. ಶ್ರೀರಂಗಪಟ್ಟಣ ತಾಲೂಕು ಗಣಂಗೂರು ಟೋಲ್ ಸಮೀಪದ ಮಂಡ್ಯ ಮಾರ್ಗದಲ್ಲಿ ಸ್ಪೀಡ್ ಹಂಟರ್ ಯಂತ್ರದ ಮೂಲಕ ಅತಿ ವೇಗವಾಗಿ ಸಂಚರಿಸುವ ವಾಹನಗಳ ಪರಿಶೀಲಿಸಿದರು.

ರಸ್ತೆ ಬದಿಯಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾ ಅಳವಡಿಸಿಕೊಂಡು ವಾಹನಗಳತ್ತ ಕ್ಯಾಮೆರಾ ಲೆನ್ಸ್ ಅನ್ನು ಕೇಂದ್ರೀಕರಿಸುತ್ತಿದ್ದರು. ಸ್ಪೀಡ್ ಹಂಟರ್ ಯಂತ್ರದ ಡಿಸ್‌ಪ್ಲೇನಲ್ಲಿ ಅತಿ ವೇಗವಾಗಿ ಬರುತ್ತಿದ್ದ ವಾಹನಗಳ ಫೋಟೋ ಮತ್ತು ನಂಬರ್ ಪ್ಲೇಟ್ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸಮೀಪದ ಟೋಲ್ ಪ್ಲಾಜಾಗೆ ರವಾನಿಸಲಾಯಿತು. ಅದರಂತೆ ಪ್ಲಾಜಾದಲ್ಲಿ ಟೋಲ್ ಜತೆಗೆ ಓವರ್‌ಸ್ಪೀಡ್ ಚಾಲನೆಗಾಗಿ ದಂಡ ವಸೂಲಿ ಮಾಡಲಾಯಿತು.