ಕಾರವಾರ:ಮುರ್ಡೇಶ್ವರಕ್ಕೆ ವಿಸ್ತರಣೆಗೊಂಡ ಬೆಂಗಳೂರು-ಮೈಸೂರು-ಮಂಗಳೂರು ರೈಲಿನ ಓಡಾಟವು ಸೆ. 16 ರಂದು ಪ್ರಾರಂಭವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ 73 ನೇ ಜನ್ಮದಿನದ ಸಂದರ್ಭದಲ್ಲಿ ರಾಜ್ಯ ರಾಜಧಾನಿಯಿಂದ ಜಿಲ್ಲೆಗೆ ಎರಡನೇ ರೈಲು ತಲುಪಲಿರುವುದು ವಿಶೇಷ ಎಂದು ರೈಲಿಗಾಗಿ ಹೋರಾಟ ನಡೆಸಿದವರು ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಿಂದ ರಾತ್ರಿ 8.15 ಕ್ಕೆ ಹೊರಡುವ ರೈಲು(16585) ಮೈಸೂರು, ಮಂಗಳೂರು ಜಂಕ್ಷನ್ ಮೂಲಕ ಮರುದಿನ ಬೆಳಗ್ಗೆ 8.55 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಅಲ್ಲಿಂದ 9.20 ಕ್ಕೆ ಬಿಟ್ಟು 1.20 ಕ್ಕೆ ಮುರ್ಡೇಶ್ವರ ತಲುಪಲಿದೆ.
ಮಧ್ಯಾಹ್ನ 1.55 ಕ್ಕೆ ಮುರ್ಡೇಶ್ವರದಿಂದ ವಾಪಸ್ ಹೊರಡುವ ರೈಲು (16586)ಮರುದಿನ ಬೆಳಗ್ಗೆ 7.15ಕ್ಕೆ ಬೆಂಗಳೂರು ತಲುಪಲಿದೆ. ವಾರದ 6 ದಿನ ರೈಲು ಸಂಚರಿಸಲಿದೆ.
ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು ಹಾಗೂ ಭಟ್ಕಳದಲ್ಲಿ ನಿಲುಗಡೆ ಇದೆ. 19 ಕೋಚ್‌ಗಳನ್ನು ಹೊಂದಿದೆ.
ಮುರ್ಡೇಶ್ವರಕ್ಕೆ ಭಾನುವಾರ ಆಗಮಿಸುವ ರೈಲನ್ನು ಸ್ವಾಗತಿಸಲು ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿ ಹಾಗೂ ಕುಂದಾಪುರ ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಮುಂದಾಗಿದೆ.
ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯ ಕಾರ್ಯದರ್ಶಿ ರಾಜೀವ ಗಾಂವಕರ್ ಈ ರೈಲಿಗಾಗಿ 3 ವರ್ಷಗಳಿಂದ ಹೋರಾಟ ನಡೆಸಿದ್ದರು. ಕುಂದಾಪುರ ರೈಲ್ವೆ ಸಮಿತಿ, ಮೈಸೂರು ಸಂಸದ ಪ್ರತಾಪ ಸಿಂಹ ಸಹ ಸಾಕಷ್ಟು ಪ್ರಯತ್ನ ನಡೆಸಿದ್ದರು.