ಜಿಲ್ಲೆ

ಒಂದೇ ಕುಟುಂಬದ ಮೂವರು ಆತ್ಮಹತ್ಯೆ; ಡೆತ್​​ನೋಟ್​​ನಲ್ಲಿ ಬಯಲಾಯ್ತು ಸಾವಿನ ರಹಸ್ಯ

theerthaswamy

ಬೆಂಗಳೂರು: ರಾಜಧಾನಿಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೋಣನಕುಂಟೆ‍ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಕೋಣನಕುಂಟೆಯ ಚುಂಚನಕಟ್ಟೆ ಎಸ್​​ಬಿಐ ಲೇಔಟ್ ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹೇಶ್, ಜ್ಯೋತಿ ಹಾಗೂ ಮಗ ನಂದೀಶ್ ಗೌಡ ಆತ್ಮಹತ್ಯೆಗೆ ಶರಣಾದವರು. ಬಿಬಿಎಂಪಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಮಹೇಶ್ ಮೂಲತಃ ಮಳವಳ್ಳಿಯವರಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ‌ ಮಹೇಶ್ ಮನೆಯ ರೂಮ್​​ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಮತ್ತೊಂದು ರೂಮ್​​ನಲ್ಲಿ ಜ್ಯೋತಿ ಹಾಗೂ ಮಗ ನಂದೀಶ್ ವಿಷ ಸೇವಿಸಿದ್ದಾರೆ.

ಸಾವಿಗೂ ಮುನ್ನ ಅನಾರೋಗ್ಯದಿಂದ ಈ ರೀತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದಿರುವ ಡೆತ್​​ನೋಟ್ ದೊರೆತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಧ್ಯಮ ವರ್ಗದ ಕುಟುಂಬಸ್ಥರಾಗಿರುವ ಮಹೇಶ್ ಕಳೆದ ಒಂದು ವಾರದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಈ ಹಿಂದೆ ಹರ್ನಿಯಾ ಆಪರೇಷನ್ ಮಾಡಿಸಿಕೊಂಡಿದ್ದರು. ಹೊಟ್ಟೆನೋವು ತೀವ್ರವಾಗಿದ್ದರಿಂದ ಇಂದು ಆಸ್ಪತ್ರೆಗೆ ತೆರಳಿದ್ದರು. ವೈದ್ಯಕೀಯ ತಪಾಸಣೆ ವೇಳೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ತನ್ನ ಸಾವಿನ ನಂತರ ತನ್ನ ಹೆಂಡ್ತಿ, ಮಕ್ಕಳ ಜೀವನ ಕಷ್ಟ ಎಂದು ನಿರ್ಧಾರ ಮಾಡಿದ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.