ಜಿಲ್ಲೆ

ನ.25-26 ಅರಮನೆ ಮೈದಾನದಲ್ಲಿ ‘ಬೆಂಗಳೂರು ಕಂಬಳ-ನಮ್ಮ ಕಂಬಳ’

ಮಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ‘ಬೆಂಗಳೂರು ಕಂಬಳ-ನಮ್ಮ ಕಂಬಳ’ ಶಿರ್ಷಿಕೆಯಡಿ ನಡೆಯಲಿದೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಪೊಲೀಸ್ ಮಾಹಿತಿ ಪ್ರಕಾರ 7ಲಕ್ಷ ಜನ ಸೇರುವೆ ನಿರೀಕ್ಷೆಯಿದ್ದು, 2ಸಾವಿರ ಜನರಿಗೆ ವಿವಿವಿಐಪಿ ವ್ಯವಸ್ಥೆ, 15ಸಾವಿರಕ್ಕೂ ಅಧಿಕ ಜನರಿಗೆ ಗ್ಯಾಲರಿ. 150ಕ್ಕೂ ಅಧಿಕ ಕರಾವಳಿಯ ವೈವಿಧ್ಯತೆಯನ್ನು ಸಾರುವ ಆಹಾರ, ತಿಂಡಿ ತಿನಸುಗಳು, ವಸ್ತುಪ್ರದರ್ಶನ ಮಳಿಗೆಗಳನ್ನು ಹಾಕಲಾಗುವುದು ಎಂದು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಅ.2ರಿಂದ 145ಮೀಟರ್ ಉದ್ದದ ಜೋಡುಕರೆ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಕಂಬಳಕ್ಕೆ ಆಗಮಿಸುವ ವೀಕ್ಷಕರ ಅನುಕೂಲಕ್ಕೆ 6 ಸಾವಿರ ಕಾರು ಪಾಕಿರ್ಂಗ್, ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ನ.23ರಂದು ಬೆಳಗ್ಗೆ 8.30ಕ್ಕೆ ಮಂಗಳೂರಿನ ನಿಗದಿತ ಸ್ಥಳದಲ್ಲಿ 125ಕ್ಕೂ ಅಧಿಕ ಜತೆ ಕೋಣಗಳು ಮೆರವಣಿಗೆ ಮೂಲಕ ಹೊರಡಲಿದೆ. ಕಂಬಳ ಕೋಣಗಳಿಗೆ ಹಾಸನದಲ್ಲಿ ಅಲ್ಲಿನ ಸಂಘಟನೆಗಳು ಭವ್ಯ ಸ್ವಾಗತ ನೀಡಲಿದ್ದು, ಸುಮಾರು 2ಗಂಟೆಗಳ ಕಾಲ ಅಲ್ಲೇ ತಂಗಲು ವ್ಯವಸ್ಥೆ ಮಾಡಲಾಗುವುದು. ಬೆಂಗಳೂರಿನಲ್ಲಿ ಒಂದು ದಿನ ವಿಶ್ರಾಂತಿ ಸಿಗಲಿದೆ. ಕಂಬಳಕ್ಕೆ ತೆರಳುವ ಕೋಣಗಳಿಗೆ, ಪರಿಚಾರಕರಿಗೆ ಬೇಕಾದ ವ್ಯವಸ್ಥೆಗಳನ್ನು ಈಗಾಗಲೇ ರೂಪಿಸಲಾಗಿದೆ. ಕೋಣಗಳ ಯಜಮಾನರ ಆಗ್ರಹದಂತೆ ಕೋಣಗಳ ಕ್ಷಮತೆ, ಆರೋಗ್ಯ ಕಾಪಾಡುವ ದೃಷ್ಟಿಯಿಂದ 6ಟ್ಯಾಂಕರ್ ನೀರನ್ನು ದ.ಕ. ಜಿಲ್ಲೆಯಿಂದಲೇ ಕೊಂಡೊಯ್ಯಲಾಗುವುದು. ಕೋಣಗಳ ಜತೆ ಜಿಲ್ಲೆಯ ಪರಿಣತ ಪಶು ವೈದ್ಯ ಅಧಿಕಾರಿಗಳು, ಆಹಾರಗಳನ್ನು ಕೊಂಡೊಯ್ಯಲಾಗುವುದು.


ಕಂಬಳಕ್ಕೆ ಅಂದಾಜು 5ರಿಂದ 6 ಕೋಟಿ ರೂ. ವೆಚ್ಚ ತಗುಲಲಿದ್ದು, ವಿಜೇತ ಪ್ರಥಮ ಕೋಣಗಳಿಗೆ 2 ಪವನ್ ಬಂಗಾರ, ದ್ವಿತೀಯ ಕೋಣಗಳಿಗೆ 1 ಪವನ್ ಬಂಗಾರ, ಭಾಗವಹಿಸಿದ ಪ್ರತಿ ಕೋಣಗಳಿಗೂ ಬಂಗಾರದ ಪದಕ ನೀಡಲಾಗುವುದು. ಬೆಂಗಳೂರು ಕಂಬಳದ ಪ್ರಾಯೋಜಕತ್ವಕ್ಕೆ ಈಗಾಗಲೇ ಹಲವರು ಸಂಪರ್ಕಿಸಿದ್ದಾರೆ ಎಂದರು.


ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ ಸಮಿತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಬೆಂಗಳೂರಿನ ಕಂಬಳದಲ್ಲಿ ಕೋಣಗಳು ಭಾಗವಹಿಸುವಾಗ ಯಾವುದೇ ತೊಂದರೆಯಾಗದಂತೆ ಮನವಿ ಮಾಡಿದ್ದಾರೆ. ಬೆಂಗಳೂರಲ್ಲಿ ನಡೆಸುವ ಮೂಲಕ ಕಂಬಳಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಗುವಂತಾಗಬೇಕು ಎಂದರು.


ಕಂಬಳ ಶಿಸ್ತು ಸಮಿತಿಯ ಮುಖ್ಯಸ್ಥ ಪಿ.ಆರ್. ಶೆಟ್ಟಿಘಿ, ಕಂಬಳ ಸಮಿತಿ ಮಾಜಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ, ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್, ತೀರ್ಪುಗಾರರಾದ ವಿಜಯ ಕುಮಾರ್ ಕಂಗಿನಮನೆ, ಕಂಬಳ ಸಮಿತಿ ಕೋಶಾಧಿಕಾರಿ ಚಂದ್ರಹಾಸ್ ಸನಿಲ್, ಬೆಂಗಳೂರು ಕಂಬಳ ಸಮಿತಿಯ ಮುರಳೀಧರ್ ಉಪಸ್ಥಿತರಿದ್ದರು.