ದಾವಣಗೆರೆ: ದಾವಣಗೆರೆ ನಗರದಲ್ಲಿ 27 ಸಾವಿರ ಜನರು ವಸತಿಗಾಗಿ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಅವರೆಲ್ಲರಿಗೂ ಸೂರು ಕಲ್ಪಿಸಲು 170 ಎಕರೆ ಜಮೀನು ಸ್ವಾಧೀನಕ್ಕಾಗಿ ಮರು ಪ್ರಸ್ತಾವನೆ ಸಲ್ಲಿಸುವಂತೆ ವಸತಿ ಸಚಿವ ವಿ. ಸೋಮಣ್ಣ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ವಿಧಾನಸೌಧದ ವಸತಿ ಸಚಿವರ ಕೊಠಡಿಯಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ವಸತಿ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಸೂರು ಕಲ್ಪಿಸಲು ಅಗತ್ಯ ಜಮೀನಿನ ದೃಷ್ಟಿಯಿಂದ ಸಮಸ್ಯೆ ಜಟಿಲವಾಗಿತ್ತು. ಜಿಲ್ಲಾಧಿಕಾರಿ ಮುಖಾಂತರ ಸಾಲಕಟ್ಟೆ ಹಾಗೂ ಕೆ.ಬೇವಿನಹಳ್ಳಿ ಸರ್ವೆ ನಂಬರಿನ 170 ಎಕರೆ ಜಮೀನನ್ನು ಗುರುತಿಸಿ ಸ್ವಾಧೀನಕ್ಕಾಗಿ ವಸತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಅನುದಾನ ಅಲಭ್ಯತೆಯ ಕಾರಣದಿಂದ ನನೆಗುದಿಗೆ ಬಿದ್ದಿತ್ತು ಎಂದು ಮಾಹಿತಿ ನೀಡಿದ್ದಾರೆ.ಇನ್ನೊಂದು ವಾರದೊಳಗೆ 100 ಎಕರೆ ಜಮೀನು ಸ್ವಾಧೀನಕ್ಕಾಗಿ ಮರು ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ನಗರದ ಅಶೋಕ ಚಿತ್ರಮಂದಿರದ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ರೈಲ್ವೆ ಕೆಳಸೇತುವೆ ವಿಷಯಕ್ಕೆ ಸಂಬಂಧಿಸಿದಂತೆ ರೈಲ್ವೆ ಗೇಟ್ ಹತ್ತಿರ ಲಿಮಿಟೆಡ್ ಹೈಟ್ ಸಬ್ ವೇಯನ್ನು ಮೇ ತಿಂಗಳ ಒಳಗಾಗಿ ನಿರ್ಮಾಣ ಮಾಡಿಕೊಡುವುದಾಗಿ ಸಭೆಯಲ್ಲಿ ಹಾಜರಿದ್ದ ರೈಲ್ವೆ ಇಲಾಖೆಯ ಉಪ ಮುಖ್ಯ ಇಂಜಿನಿಯರ್ ದೇವೇಂದ್ರ ಗುಪ್ತಾ ತಿಳಿಸಿದರು.
ಪುಷ್ಪಾಂಜಲಿ ಚಿತ್ರಮಂದಿರದ ಎದುರು ಎರಡು ವೆಂಟ್‌ಗಳುಳ್ಳ ಕೆಳಸೇತುವೆ ಹಾಗೂ ರೈಲ್ವೆ ಹಳಿಗೆ ಸಮಾನಾಂತರವಾಗಿ ಪರ್ಯಾಯ ರಸ್ತೆ ನಿರ್ಮಿಸಲು ಭೂ-ಸ್ವಾಧೀನದ ಅವಶ್ಯಕತೆಯಿದೆ, ಖಾಸಗಿಯವರ ಜಮೀನನ್ನು ಸ್ವಾಧೀನಪಡಿಸಿಕೊಂಡರೆ ಮಾತ್ರ ಪರ್ಯಾಯ ರಸ್ತೆ ನಿರ್ಮಾಣ ಮಾಡಲು ಸಾಧ್ಯ ಎನ್ನುವ ವಿಷಯವನ್ನು ಜಿಲ್ಲಾಧಿಕಾರಿ ಸಭೆಯ ಗಮನಕ್ಕೆ ತಂದರು. ರೈಲ್ವೆ ಇಲಾಖೆಯಲ್ಲಿ ಭೂ-ಸ್ವಾಧೀನಕ್ಕಾಗಿ ಅನುದಾನ ಒದಗಿಸಲು ಅವಕಾಶ ಇಲ್ಲ, ರಾಜ್ಯ ಸರ್ಕಾರ ಭೂಮಿ ಒದಗಿಸಿದರೆ ಮಾತ್ರ ನಾವು ಕೆಳಸೇತುವೆ ನಿರ್ಮಾಣ ಮಾಡಬಹುದು ಎಂದು ರೈಲ್ವೆ ಅಧಿಕಾರಿಗಳು ಹೇಳಿದರು.
ಭೂ-ಸ್ವಾಧೀನಕ್ಕೆ ಅಗತ್ಯವಾದ ಹಣ ನೀಡುವವರು ಯಾರು ಎನ್ನುವ ವಿಷಯ ಸಭೆಯಲ್ಲಿ ಚರ್ಚೆಗೀಡುಮಾಡಿತು. ಕೊನೆಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಮೂಲಸೌಲಭ್ಯ ಖಾತೆ ಸಚಿವ ವಿ. ಸೋಮಣ್ಣ, ಭೂ-ಸ್ವಾಧೀನಕ್ಕೆ ಎಷ್ಟು ಬೇಕಾಗಬಹುದು ಎನ್ನುವುದನ್ನು ಪ್ರತ್ಯೇಕವಾಗಿ ಪ್ರಸ್ತಾವನೆ ಸಿದ್ಧಪಡಿಸಿ ರೈಲ್ವೆ ಇಲಾಖೆಯವರಿಗೆ ಕೊಡಿ, ಅವರು ಭೂ-ಸ್ವಾಧೀನದ ಹಣ ಸೇರ್ಪಡೆ ಮಾಡಿಕೊಂಡು ನಮಗೆ ಒಟ್ಟಾರೆ ಅಂದಾಜುಪಟ್ಟಿ ಸಲ್ಲಿಸಲಿ. ತಾವು ಮತ್ತು ಸಂಸದರು ಸಿಎಂ ಜತೆಗೆ ಮಾತನಾಡಿ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುದಾನ ಒದಗಿಸಲು ಮನವಿ ಮಾಡಿಕೊಳ್ಳುತ್ತೇವೆ ಎಂದರು.
ತೋಳಹುಣಸೆ ಬಳಿ ರೈಲ್ವೆ ಗೇಟ್‌ಗೆ ಅಡ್ಡಲಾಗಿ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣ ಮಾಡಿರುವ ಫ್ಲೈ ಓವರ್ ಕೆಳಗೆ ಜನರಿಗೆ ಓಡಾಡಲು ಸಬ್ ವೇ ನಿರ್ಮಾಣ ಮಾಡಬೇಕಾಗಿತ್ತು, ಇದಕ್ಕೆ ಸಂಬಂಧಿಸಿದ 6.75 ಕೋಟಿ ಹಣವನ್ನು ಕೆಶಿಪ್‌ನವರು ರೈಲ್ವೆ ಇಲಾಖೆಗೆ ಠೇವಣಿ ಮಾಡಿದರೆ ಸಬ್ ವೇ ನಿರ್ಮಾಣ ಮಾಡಿಕೊಡಲಿದ್ದಾರೆ ಎಂದು ಸಂಸದರು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್. ಅನಿಲ್‌ಕುಮಾರ್ ಅವರಿಗೆ ತಿಳಿಸಿದರು. ಐಡಿಡಿ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರಮೂರ್ತಿ ಮತ್ತಿತರ ಅಧಿಕಾರಿಗಳು ಇದ್ದರು.