ಬಳ್ಳಾರಿ: ಬೆಂಗಳೂರಿನಿಂದ ಶನಿವಾರ ಬೆಳಗ್ಗೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ನಗರಕ್ಕೆ ಆಗಮಿಸಿದ್ದ ಆಂಧ್ರಪ್ರದೇಶದ ಆದೋನಿ ಮೂಲದ ಒಂಬತ್ತು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ವಿವಿಧೆಡೆ ಕೆಲಸ ಮಾಡುವ ಹಾಗೂ ಕೆಲವು ವಿದ್ಯಾರ್ಥಿಗಳು ಆದೋನಿಗೆ ಹೋಗುವ ಉದ್ದೇಶದಿಂದ ಬಳ್ಳಾರಿಗೆ ಟಿಕೆಟ್ ಪಡೆದಿದ್ದರು. ಬಳ್ಳಾರಿಗೆ ಹೋದರೆ ಅಲ್ಲಿಂದ ಆದೋನಿಗೆ ತೆರಳಲು ಪಾಸ್ ನೀಡುತ್ತಾರೆ ಎಂದು ಬೆಂಗಳೂರಿನಲ್ಲಿ ಅಧಿಕಾರಿಗಳು ತಿಳಿಸಿದ್ದರು ಎಂದು ಹೇಳಲಾಗಿದೆ. ಇದರಿಂದಾಗಿ ಒಂಬತ್ತು ಜನ ಪ್ರಯಾಣಿಕರು ನಗರಕ್ಕೆ ಆಗಮಿಸಿದ್ದರು. ಆದರೆ, ಜಿಲ್ಲಾಧಿಕಾರಿ ಆದೋನಿಗೆ ಹೋಗಲು ಅನುಮತಿ ನೀಡಲಿಲ್ಲ. ಬಳಿಕ ಎಲ್ಲ ಒಂಬತ್ತು ಜನರನ್ನು ನಗರದ ಅಲ್ಲಿಪುರದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಒಂಬತ್ತು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.