ಜಿಲ್ಲೆ

ಬೆಂಗಳೂರು ಕೃಷಿ ವಿವಿ: ನ.3ರಿಂದ ಜಾಗತಿಕ ಅಣಬೆ ಸಮ್ಮೇಳನ

ಬೆಂಗಳೂರು: ವ್ಯವಸಾಯ ಕ್ಷೇತ್ರದ ಪೂರಕ ಉಪ ಉದ್ದಿಮೆಯಾದ ಅಣಬೆ ಕೃಷಿಯನ್ನು ಮುನ್ನೆಲೆಗೆ ತರುವ ದೃಷ್ಟಿಯಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಯುಎಎಸ್‌ಬಿ) ಖಾಸಗಿ ಸಹಭಾಗಿತ್ವದಡಿ ನಗರದ ಲಲಿತ್ ಅಶೋಕ ಹೋಟೆಲ್‌ನಲ್ಲಿ ನ.3ರಿಂದ 7ರ ವರೆಗೆ ಜಾಗತಿಕ ಅಣಬೆ ಸಮ್ಮೇಳನವನ್ನು ಆಯೋಜಿಸಿದೆ.

ದೇಶದಲ್ಲಿ ಅಣಬೆ ಬೇಸಾಯ ಹಾಗೂ ಪೂರೈಕೆಗೆ ಹೆಚ್ಚಿನ ಬೇಡಿಕೆ ಇದ್ದರೂ, ಉತ್ಪಾದನೆ ಕೊರತೆ ಇದೆ. ಇದಕ್ಕಾಗಿ ಉತ್ಪಾದನೆಗೆ ಪೂರಕ ವಾತಾವರಣ ಕಲ್ಪಿಸುವುದು, ತರಬೇತಿ, ಮಾರುಕಟ್ಟೆ ಜಾಲ ವಿಸ್ತರಣೆ ಹಾಗೂ ಉದ್ದಿಮೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಚಿಂತನ-ಮಂಥನ ನಡೆಸಿ ಸ್ಪಷ್ಟ ಕಾರ್ಯಸೂಚಿ ಸಿದ್ಧಪಡಿಸಿ ಉದ್ಯಮವನ್ನು ಪುನರ್ ರೂಪಿಸಲು ಹಣಬೆ ಸಮ್ಮೇಳನವನ್ನು ಸಂಘಟಿಸಲಾಗಿದೆ ಎಂದು ಯುಎಎಸ್‌ಬಿ ಕುಲಪತಿ ಡಾ. ಎಸ್.ವಿ. ಸುರೇಶ್ ಬುಧವಾರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನ ಐದು ದಿನ ನಡೆಯಲಿದ್ದು, ಮೊದಲ ಎರಡು ದಿನ ಅಣಬೆ ಕೃಷಿ ಕ್ಷೇತ್ರದ ಪರಿಣಿತರು, ವಿಜ್ಞಾನಿಗಳು, ಪ್ರಮುಖ ಉದ್ದಿಮೆದಾರರು, ನವೋದ್ಯಮಿಗಳು, ವಿದೇಶದ ಪ್ರತಿನಿಧಿಗಳು ವಿಚಾರಸಂಕಿರಣ ಹಾಗೂ ಗೋಷ್ಠಿಗಳಲ್ಲಿ ಚರ್ಚಿಸಿ ಮಶ್ರೂಮ್ ಕೃಷಿ ಬೆಳವಣಿಗೆಗೆ ಸ್ಪಷ್ಟ ಚೌಕಟ್ಟು ರೂಪಿಸಲಾಗುವುದು. ಕೊನೆಯ ಮೂರು ದಿನ ಪ್ರತಿನಿಧಿಗಳಿಗೆ ವಿವಿಧ ತಳಿಗಳ ಬಗ್ಗೆ ಪ್ರಾತ್ಯಕ್ಷಿಕೆ, ತರಬೇತಿ ಹಾಗೂ ಇನ್ನಿತರ ಮಾಹಿತಿಯನ್ನು ವಿದೇಶಿ ಪರಿಣಿತರು ನೀಡಲಿದ್ದಾರೆ ಎಂದರು.

250 ಮಂದಿಗೆ ತರಬೇತಿ:

ಬೆಂಗಳೂರು ಕೃಷಿ ವಿವಿಯ ಬಿಎಸ್ಸಿ ಕೃಷಿ ಪದವಿ ವಿದ್ಯಾರ್ಥಿಗಳಿಗೆ ಮೊದಲ ವರ್ಷದ ಕೋರ್ಸ್‌ನಲ್ಲೇ ಅಣಬೆ ಕೃಷಿ ಕುರಿತು ಒಂದು ಸೆಮಿಸ್ಟರ್ ಮೀಸಲಿಡಲಾಗಿದೆ. ಇದರಿಂದ ಪದವೀಧರರಾದ ಬಳಿಕ ಸ್ವಯಂ ಉದ್ದಿಮೆ ಕೈಗೊಳ್ಳಲು ಅನುಕೂಲವಾಗಲಿದೆ. ಜತೆಗೆ ಆಸಕ್ತ ನಾಗರಿಕರಿಗೆ ವಿವಿಯಿಂದ ಐದು ದಿನಗಳ ತರಬೇತಿ ನೀಡುವ ಕಾರ್ಯಕ್ರಮ ಪ್ರಗತಿಯಲ್ಲಿದೆ. ಕಳೆದೆರಡು ವರ್ಷದಲ್ಲಿ 250 ಮಂದಿ ತರಬೇತಿ ಪಡೆದಿದ್ದು, ಸ್ವಯಂ ಉದ್ಯೋಗಕ್ಕೆ ವಿವಿಯು ನೆರವಾಗಿದೆ. ಈ ತರಬೇತಿಯನ್ನು ವರ್ಷದುದ್ದಕ್ಕೂ ನೀಡಲು ನಿರ್ಧರಿಸಲಾಗಿದೆ ಎಂದು ಕುಲಪತಿ ವಿವರಿಸಿದರು.

ಇದೇ ವೇಳೆ ಸಮ್ಮೇಳನದ ಕಿರುಹೊತ್ತಿಗೆಯನ್ನು ಕುಲಪತಿ ಹಾಗೂ ಇತರರು ಬಿಡುಗಡೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಿವಿಯ ಸಂಶೋಧನಾ ನಿರ್ದೇಶಕ ಡಾ. ಎಚ್.ಎಸ್. ಶಿವರಾಮು, ಡಾ. ಎನ್.ಉಮಾಶಂಕರ್, ಮಿಲ್ಕಿವೇ ಟೆಕ್ನಾಲಿಜೀಸ್ ಅನುರಾಗ್ ಸಕ್ಸೇನಾ ಹಾಜರಿದ್ದರು.

12 ದೇಶಗಳ ವಿಜ್ಞಾನಿಗಳು ಭಾಗಿ:

ಜಾಗತಿಕ ಅಣಬೆ ಸಮ್ಮೇಳನದಲ್ಲಿ ಭಾರತವೂ ಸೇರಿ 12 ದೇಶಗಳ ಪರಿಣಿತರು ಹಾಗೂ ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ಪೋಲೆಂಡ್, ಇಟಲಿ, ನೆದರ್‌ಲೆಂಡ್, ಚೀನಾ, ನೇಪಾಳ, ಭೂತಾನ್ ಹಾಗೂ ಇತರ ದೇಶಗಳಿಂದ ಆಗಮಿಸುವ ವಿಜ್ಞಾನಿಗಳು ಭಾರತದ ವಿಜ್ಞಾನಿಗಳೊಂದಿಗೆ ಚರ್ಚೆ, ವಿಚಾರ ವಿನಿಮಯ ಹಾಗೂ ತರಬೇತಿ ತಾಂತ್ರಿಕತೆಯನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.