ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಈಗಾಗಲೇ ಹಲವಾರು ಕಾರ್ಯಕ್ರಮ ರೂಪಿಸಲಾಗಿದ್ದು, ಇದರೊಂದಿಗೆ ರಾಜ್ಯದಲ್ಲೆ ಪ್ರಥಮ ಬಾರಿಗೆ ವಿಶೇಷವಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ 1000 ದಿನದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಪಿರುಲಿನಾ ಫೌಂಡೇಷನ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ದೇವನಹಳ್ಳಿಯ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಪೌಷ್ಟಿಕತೆ ನಿವಾರಣೆ ಮತ್ತು ತಡೆಗಟ್ಟುವಿಕೆ ಕುರಿತ 1000 ದಿನಗಳ ಮಹತ್ವದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ಮಗು ಮೊದಲ 1000 ದಿನದಲ್ಲಿ ಅಪೌಷ್ಟಿಕತೆಗೆ ತುತ್ತಾದರೆ. ಅದು ಮುಂದಿನ ಜೀವನ ಪರ್ಯಂತ ಶಿಣ, ವ್ಯವಹಾರ, ಉದ್ಯೋಗ ಸೇರಿ ಎಲ್ಲ ರಂಗಗಳಲ್ಲಿಯೂ ವಿಫಲವಾಗುವ ಸಾಧ್ಯತೆ ಇದೆ. ಇಂಥ ಸಂದರ್ಭದಲ್ಲಿ ಅಂಥವರಿಗೆ ಸರ್ಕಾರದ ನಾನಾ ಸೌಲಭ್ಯ ನೀಡಿ, ಆರೋಗ್ಯ ಸುಧಾರಿಸಬೇಕಿದೆ. ಇಂತಹ ಸನ್ನಿವೇಶಗಳನ್ನು ತಪ್ಪಿಸಿ, ಆರೋಗ್ಯವಂತ ನಾಗರಿಕನನ್ನಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ದೇಶದ ಅಭಿವೃದ್ಧಿಯಲ್ಲಿ ಪ್ರತಿ ನಾಗರಿಕರು ಪಾಲ್ಗೊಳ್ಳುವಂತೆ ಮಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಮನುಷ್ಯ ಜೀವನದ ಮೊದಲ ಸಾವಿರ ದಿನಗಳಾದ 270 ದಿನಗಳು (9 ತಿಂಗಳ ಗರ್ಭಿಣಿ), 365 ದಿನಗಳು (1 ವರ್ಷ), 365 ದಿನಗಳು(2ನೇ ವರ್ಷ) ಅತ್ಯಂತ ಪ್ರಮುಖ ಟ್ಟವಾಗಿದೆ. ಮನುಷ್ಯ ದೇಹದ ಅತ್ಯಂತ ಶ್ರೇಷ್ಠ ಅಂಗವಾದ ಮಿದುಳು ಬೆಳೆಯುವುದು ಈ 1000 ದಿನಗಳಲ್ಲಿ. ಆದ್ದರಿಂದ ಈ ಅವಧಿಯಲ್ಲಿ ಮಕ್ಕಳಿಗೆ ಸರಿಯಾದ ಆರೈಕೆ ಸಿಗಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಎಸ್.ಕೇದಾರ್ ಹೇಳಿದರು.
ಬಡತನಕ್ಕೂ ದಾರಿ: ಬುದ್ಧಿಶಕ್ತಿ ಕುಂಠಿತ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿಯುವುದು ಮಾತ್ರವಲ್ಲದೆ, ಭವಿಷ್ಯದ ದುಡಿಮೆಯ ಸಂದರ್ಭದಲ್ಲೂ ಎಡವುತ್ತಾರೆ. ಇದು ಮುಂದಕ್ಕೆ ಅಂಥ ಮಗುವಿನ ಶಾಶ್ವತ ಬಡತನಕ್ಕೂ ದಾರಿಯಾಗುತ್ತದೆ ಎಂದು ಕೇದಾರ್ ಹೇಳಿದರು. ದೇಶದ ಅಭಿವೃದ್ಧಿಯ ದೃಷ್ಠಿಯಿಂದ ನಾವೆಲ್ಲರೂ ಸಾವಿರ ದಿನದ ಸಂಕಲ್ಪ ಮಾಡಿ, ಪ್ರತಿಯೊಬ್ಬರಲ್ಲೂ ಇದರ ಮಹತ್ವದ ಅರಿವನ್ನು ಮೂಡಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಹೇಳಿದರು.
ಪ್ರತಿ ಪಂಚಾಯಿತಿಯಲ್ಲಿಯೂ ಅರಿವು: ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಪೌಷ್ಟಿಕ ಕೊರತೆ ಕಂಡುಬರುತ್ತದೆ, ಅನಕ್ಷರತೆ, ಬಡತನ, ಅರಿವಿನ ಕೊರತೆ ಮತ್ತಿತರ ಕಾರಣಗಳಿಂದ ಪಾಲಕರು ಮಕ್ಕಳ ಪೋಷಣೆಗೆ ಸರಿಯಾದ ವ್ಯವಸ್ಥೆ ಮಾಡಲು ಸಾಧ್ಯವಾಗದ ಸಂದರ್ಭಗಳು ಇವೆ. ಈ ಹಿನ್ನೆಲೆಯಲ್ಲಿ ಈ ಮಹತ್ಪಾಕಾಂ ಯೋಜನೆಯನ್ನು ಜಿಲ್ಲೆ ಅಷ್ಟೂ ಪಂಚಾಯಿತಿಗಳಲ್ಲಿ ಸಕಾರಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರೇವಣಪ್ಪ ತಿಳಿಸಿದರು.