ಕಲಬುರಗಿ: ಬಾಂಗ್ಲಾದೇಶದ ಮಾದರಿಯಲ್ಲಿ ಭಾರತದಲ್ಲೂ ದಂಗೆ ಎಬ್ಬಿಸಿ, ಸರ್ಕಾರವನ್ನು ಉರುಳಿಸುವ ಪ್ರಯತ್ನಗಳ ಮುನ್ಸೂಚನೆಗಳು ಕಾಣುತ್ತಿದೆ. ಮುಂದಿನ ಎರಡ್ಮೂರು ತಿಂಗಳು ದೇಶದ ಪ್ರಜ್ಞಾವಂತ ಜನರು ಸುಳ್ಳುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು, ಜಾಗೃತರಾಗಿ ಇರಬೇಕು ಎಂದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಕೋಟೆ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ವೇದಿಕೆಯಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಅಮೆರಿಕದ ಗುಪ್ತಚರ ಸಂಸ್ಥೆ ಬಾಂಗ್ಲಾದೇಶದಲ್ಲಿ ಗಲಭೆ ಎಬ್ಬಿಸಿ, ಸರ್ಕಾರ ಉರುಳಿಸಿತು. ಅದೇ ಮಾದರಿ ಭಾರತದಲ್ಲೂ ಅಮೆರಿಕಾ ರಾಯಬಾರ ಕಚೇರಿ ಅಧಿಕಾರಿಗಳು ಪ್ರತಿಭಟನಾ ನಿರತ ರೈತ ಹೋರಾಟಗಾರರನ್ನು, ಅಕ್ಬರುದ್ದೀನ್ ಓವೈಸಿಯನ್ನು, ಖಲಿಸ್ತಾನಿಗಳನ್ನು ಭೇಟಿ ಮಾಡಿ, ಬೆಂಬಲ ನೀಡುತ್ತಿದೆ. ಇದರ ಹಿಂದೆ ಸರ್ಕಾರ ಉರುಳಿಸಿ, ಮೋದಿ ಅವರನ್ನು ವಿದೇಶಕ್ಕೆ ಓಡಿಸುವ ಸಂಚು ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕಕ್ಕೆ ಭೇಟಿ ನೀಡಿದ್ದು ೧೫ ದಿನ. ಅದರಲ್ಲಿ ೬ ಗಂಟೆಯ ಭಾಷಣ ದೇಶಕ್ಕೆ ತಿಳಿದಿದೆ. ಉಳಿದ ದಿನದ ಸುದ್ದಿ ಎಲ್ಲಿಯೂ ಇಲ್ಲ. ನವೆಂಬರ್‌ನಲ್ಲಿ ಅಮೆರಿಕದಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕಿಂತ ಮುಂಚೆ ಭಾರತದಲ್ಲಿ ಗಲಭೆ ಎಬ್ಬಿಸುವ ಸಂಚು ನಡೆದಿರುವ ಶಂಕೆ ಇದೆ. ಪೂರಕವಾಗಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ, ರೈಲ್ವೆ ಹಳಿ ತಪ್ಪಿಸುವ ಪ್ರಯತ್ನ, ಅಮೆರಿಕಾದಿಂದ ಖಲಿಸ್ತಾನಿಗಳಿಗೆ ಬೆಂಬಲ ಘೋಷಣೆಯಂತ ಘಟನೆ ನಡೆದಿವೆ. ಎಚ್ಚರಿಕೆಯಿಂದ ಇರದಿದ್ದರೆ ಭಾರತ ಚೂರು ಚೂರು ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂವಿಧಾನ ಕಗ್ಗೊಲ್ಲೆಗೈದವರು ಇಂದಿರಾ ಗಾಂಧಿ: ಕಾಲಕ್ಕೆ ತಕ್ಕಂತೆ ಸಂವಿಧಾನ ಬದಲಾಗಬೇಕು, ಬದಲಾವಣೆ ಇವತ್ತಿಗೆ, ಭವಿಷ್ಯಕ್ಕೆ ಪೂರಕವಾಗಿರಬೇಕು ಎಂದವರು ಇಂದಿರಾಗಾಂಧಿ, ಸ್ಥಿರ ಸಂವಿಧಾನ ದೇಶಕ್ಕೆ ಮಾರಕ ಎಂದಿದ್ದು ಕಾಂಗ್ರೆಸ್‌ನ ಎ.ಆರ್.ಆಂಟೋಲಿ, ಸಂವಿಧಾನ ಬದಲಾಯಿಸಿದವರು ದೇಶಭಕ್ತರು ಎಂದಿದ್ದು ಕಾಂಗ್ರೆಸ್‌ನ ಪ್ರಿಯರಂಜನ್ ದಾಸ್. ಇಂತಹ ಪಡೆಯ ನಾಯಕಿ ಇಡೀ ದೇಶದಲ್ಲಿ ಎಲ್ಲರ ಮೂಲಭೂತ ಹಕ್ಕುಗಳನ್ನು ಕಿತ್ತೆಸೆದು ತುರ್ತು ಪರಿಸ್ಥಿತಿ ಹೇರಿದರು. ಆದರೆ ಮೋದಿ ಸ್ವತಃ ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾವಣೆ ಅಸಾಧ್ಯ ಎಂದಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಸಾವಳಗಿ ಶಿವಲಿಂಗೇಶ್ವರ ಮಠದ ಶ್ರೀ ಗುರುನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಶಾಸಕ ಬಸವರಾಜ ಮತ್ತಿಮಡು, ನಿತೀನ್ ಗುತ್ತೇದಾರ್, ಹಿಂದು ಮಹಾಗಣಪತಿ ಅಧ್ಯಕ್ಷ ನಾಗೇಂದ್ರ ಕಬಾಡೆ, ಶರಣು ಪಪ್ಪಾ, ಸುರೇಶ ಟೆಂಗಳಿ, ಸಿದ್ದರಾಜ ಬಿರಾದಾರ, ಅಂಬಾಜಿ ಶಿವಾಜಿ, ರಮೇಶ ಚಿತಕೋಟೆ, ಉಮೇಶ ಪಾಟೀಲ್, ಸಿದ್ದರಾಜ ಬಿರಾದಾರ, ಶಿವಯೋಗಿ ನಾಗನಹಳ್ಳಿ, ಪರಮೇಶ್ವರ ಆಲಗೂಡ, ಸಂತೋಷ ಪೂಜಾರಿ ಇತರರಿದ್ದರು. ನಾಗಯ್ಯ ಸ್ವಾಮಿ ಸ್ವಾಗತಿಸಿದರು.