ಜಿಲ್ಲೆ

ಬಯಲಾಟಕ್ಕೆ ಪ್ರಸಿದ್ಧಿ ಬಂಡ್ರಿ ಲಿಂಗಪ್ಪ

ಬಳ್ಳಾರಿ : ಬಯಲಾಟದ ತವರೂರು ಎಂಬ ಖ್ಯಾತಿ ಗಣಿನಾಡು ಜಿಲ್ಲೆ ಪಡೆದಿದೆ. ಸಂಡೂರು ತಾಲೂಕಿನ ತಾಳೂರು ಗ್ರಾಮದ ಹಿರಿಯ ಕಲಾವಿದ ಬಂಡ್ರಿಲಿಂಗಪ್ಪ ಅವರು ಕಳೆದ ಕೆಲ ದಶಕಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಯಲಾಟದ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಕಲೆ ಪ್ರದರ್ಶಿಸಿದ್ದಾರೆ.

ಇವರು ಬಯಲಾಟದಲ್ಲಿ ಮಹಾಭಾರತ ಮತ್ತು ರಾಮಾಯಣದ ಸನ್ನಿವೇಷಗಳು, ಗಿರಿಜಾ ಕಲ್ಯಾಣ, ರಾಮಾಂಜನೇಯ ಯುದ್ಧ, ಸಂಪೂರ್ಣ ರಾಮಾಯಣ ನಾಟಕಗಳಲ್ಲಿ ಮನ್ಮಥ, ಭರತ, ರಾವಣಾಸುರ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಅಭಿನಯ ಜತೆಗೆ ನಿರ್ವಹಣೆ, ಗಾಯನ ಮತ್ತು ತಾಳಮದ್ದಳ ಸಂಯೋಜನೆಗಳು, ಭಜನೆ,ಹಾಡುಗಾರಿಕೆ, ತತ್ವಪದ ಹಾಡಿ ಜನರಿಂದ ಬಾರಿ ಮೆಚ್ಚುಗೆ ಪಡೆದು ಪ್ರಖ್ಯಾತಿ ಪಡೆದಿದ್ದಾರೆ. ಈವರೆಗೆ ಫಲಾಪೇಕ್ಷೆಯಿಲ್ಲದೆ ಈ ನೆಲದ ಗಂಡುಮೆಟ್ಟಿನ ಕೆಲ ಬಯಲಾಟ ಕಲೆಯನ್ನು ಜೀವಂತವಾರಿಸುವುದರಲ್ಲಿ ಮುಂಚೂಣಿಯ ಸ್ಥಾನದಲ್ಲಿದ್ದಾರೆ. ಕಳೆದ 56 ವರ್ಷಗಳ ಕಲಾಸೇವೆ ಸಲ್ಲಿಸಿದ್ದು, ಇವರು ಯಾವುದೇ ಪ್ರಚಾರ ಮುಂಬೆಳಕಿನಿಂದ ದೂರವಿದ್ದು ಎಲೆಮರೆ ಕಾಯಿಯಾಗಿ ಕಲೆಯನ್ನು ನಿಸ್ವಾರ್ಥವಾಗಿ ಮಾಡುತ್ತಾ ಬಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆಧುನಿಕ ಮನರಂಜನಾ ಸಾಧನಗಳಾದ ಟಿವಿ, ಸಿನಿಮಾ ಮತ್ತು ಇಂಟನೆಟ್‌ನಿಂದ ಬಯಲಾಟವು ತನ್ನ ಮೊದಲಿನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಮತ್ತು ಆರ್ಥಿಕ ನೆರವು ಸಿಗದಿರುವುದು ಈ ಕಲೆಯ ಅವನತಿಗೆ ಒಂದು ಕಾರಣವಾಗಿದೆ. ಬಯಲಾಟವು ಕೇವಲ ಒಂದು ಕಲೆಯಲ್ಲ, ಅದು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಇದನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಈ ಜಾನಪದ ಕಲೆಯನ್ನು ಬೆಳೆಸಲು ಮತ್ತು ಮುಂದಿನ ಪೀಳಿಗೆಗೆ ತಲುಪಿಸಲು ಹೆಚ್ಚಿನ ಪ್ರೋತ್ಸಾಹ ಮತ್ತು ಬೆಂಬಲದ ಅವಶ್ಯಕತೆಯಿದೆ.

ಪ್ರದರ್ಶನ : ಜಿಲ್ಲೆಯ ಸುತ್ತಮುತ್ತ ಗ್ರಾಮಗಳಲ್ಲಿ ಬಯಲಾಟ ಕಲೆ ಪ್ರದರ್ಶಿಸಿದ್ದಾರೆ. ಅಲ್ಲದೆ, ಹೊಸಪೇಟೆ ಆಕಾಶವಾಣಿ ವತಿಯಿಂದ ಬಯಲಾಟ ಸೇವೆ ಕುರಿತು ಸಂದರ್ಶನ ಆರು ಬಾರಿ ಪ್ರಸಾರಿಸಿದೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಯಲಾಟ ಪ್ರದರ್ಶನ, ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ವಿವಿಧ ಪಾತ್ರಗಳ ಅಭಿನಯ ಸೇರಿದಂತೆ ಶಿವರಾತ್ರಿ ಪ್ರಯುಕ್ತಗಾಗಿಯೇ 30 ಬಾರಿ ಬಯಲಾಟ ಪ್ರದರ್ಶಿಸಿದ್ದಾರೆ.

ಪ್ರಶಸ್ತಿಗಳು : ಮನ್ವಂತರ ಧರೆಯ ಮಾತು ತಂಡದಿಂದ 2023ರಲಿ ್ಲರಾಜ್ಯಮಟ್ಟದ ಕಲಾಕೇಸರಿ ಪ್ರಶಸ್ತಿ, ಸುಭಾಷ್ ಭರಣಿ ಸಾಂಸ್ಕ್ರತಿಕ ವೇದಿಕೆಯಿಂದ 2025ರಲ್ಲಿ ರಂಗಗೌರವ ಪ್ರಶಸ್ತಿ ಹಾಗೂ ಕಾರಂತರಂಗ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ, ವಿವಿಧ ಕಾರ್ಯಕ್ರಮಗಳಲ್ಲಿ ಇವರ ಕಲೆ ಗುರುತಿಸಿ ಸನ್ಮಾನಿಸಿ ಗೌರವಿಸಲಾಗಿದೆ.

ಕೋಟ್.. ಕಳೆದ ಹಲವು ವಷಗಳಿಂದ ಬಯಲಾಟಕ್ಕಾಗಿಯೇ ಜೀವನ ಮುಡಿಪಾಗಿ ಇಟ್ಟಿರುವೆ. ಆದರೆ, ರಾಜ್ಯ ಸರ್ಕಾರದಿಂದ ಈವರೆಗೆ ಯಾವ ಪ್ರಶಸ್ತಿ ಅಥವಾ ಕಲಾವಿದರ ಮಾಶಾಸನವಾಗಲಿ ದೊರೆತಿಲ್ಲ.

- ಬಂಡ್ರಿ ಲಿಂಗಪ್ಪ, ಬಯಲಾಟ ಕಲಾವಿದ, ತಾಳೂರು.