ಜಿಲ್ಲೆ

ಬೆಂಗಳೂರಿನಲ್ಲಿ ಮಾರ್ಗಸೂಚಿ ಪಾಲಿಸದ ಪಿ.ಜಿ.ಗಳ ಬಂದ್

ಬೆಂಗಳೂರು: ಮಹಾನಗರದಲ್ಲಿ ಪಾಲಿಕೆಯ ಮಾರ್ಗಸೂಚಿ ಪಾಲಿಸದ ಪಿಜಿಗಳನ್ನು ಮುಚ್ಚುವ ಕಾರ್ಯ ಕೈಗೆತ್ತಿಕೊಂಡಿದ್ದು, ಅನಧಿಕೃತವಾಗಿ ನಡೆಯುತ್ತಿದ್ದಲ್ಲಿ ಬಂದ್ ಮಾಡಲಾಗುವುದು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಪಾಲಿಕೆಯ ಎಲ್ಲ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಅಧಿಕೃತ ಹಾಗೂ ಅನಧಿಕೃತ ಪಿ.ಜಿಗಳಿಗೆ ಭೇಟಿ ನೀಡಿ ಪಾಲಿಕೆ ಮಾರ್ಗಸೂಚಿಗಳನ್ನು ಪಾಲಿಸದ ಪಿಜಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 2,193 ಅಧಿಕೃತ ಪಿ.ಜಿ.ಗಳಿವೆ. ಈ ಪೈಕಿ 1,578 ಮಾರ್ಗಸೂಚಿಗಳಲ್ಲಿ ಸೂಚಿಸಿರುವ ಅಂಶಗಳನ್ನು ಪಾಲಿಸುತ್ತಿದ್ದು, ಉಳಿದ 615 ಪಿ.ಜಿ.ಗಳು ಅನುಸರಿಸುತ್ತಿರುವುದಿಲ್ಲ. ಮಾರ್ಗಸೂಚಿಗಳನ್ನು ಅನುಸರಿಸದ ಪಿ.ಜಿ.ಗಳನ್ನು ಸೇರಿ ಇಲ್ಲಿಯವರೆಗೆ 1,011 ಅಧಿಕೃತ ಪಿ.ಜಿ. ಗಳಿಗೆ ನೋಟೀಸ್‌ನ್ನು ಜಾರಿ ಮಾಡಲಾಗಿದೆ ಎಂದು ಗುರುವಾರ ಹೇಳಿದ್ದಾರೆ.

2,320 ಅನಧಿಕೃತ ಪಿಜಿ:

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2,320 ಅನಧಿಕೃತ ಪಿ.ಜಿ.ಗಳಿವೆ. ಈ ಪಯಕಿ 1,674 ಪಿ.ಜಿ.ಗಳು ಮಾರ್ಗಸೂಚಿಗಳಲ್ಲಿ ಸೂಚಿಸಿರುವ ಅಂಶಗಳನ್ನು ಪಾಲಿಸಿವೆ. 646 ಪಿ.ಜಿ.ಗಳು ಮಾರ್ಗಸೂಚಿ ಅನುಸರಿಸುತ್ತಿರುವುದಿಲ್ಲ. ನಿಯಮ ಅನುಸರಿಸದವುಗಳು ಸೇರಿ ಈವರೆಗೆ 2,320 ಅಧಿಕೃತ ಪಿ.ಜಿ. ಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಾರ್ಗಸೂಚಿ ಪಾಲಿಸದ 21 ಪಿ.ಜಿ.ಗಳಿಗೆ ಬೀಗ:

ಬಿಬಿಎಂಪಿಯಿಂದ ಉದ್ದಿಮೆ ಪರವಾನಿಗೆ ಪಡೆಯದೆ ಅನಧಿಕೃತವಾಗಿ ನಡೆಸುತ್ತಿರುವ ಹಾಗೂ ಮಾರ್ಗಸೂಚಿ ಪಾಲಿಸದ ಪಿ.ಜಿ.ಗಳಿಗೆ 2-3 ಬಾರಿ ನೋಟೀಸ್ ನೀಡಲಾಗಿದೆ. ಇದಕ್ಕೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಈ ಸಂಬಂಧ ಪಿಜಿಗಳನ್ನು ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 305 ಹಾಗೂ 308ರಡಿಯಲ್ಲಿ ತಕ್ಷಣದಿಂದ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಅದರಂತೆ 1 ಅಧಿಕೃತ ಪಿಜಿ ಹಾಗೂ 20 ಅನಧಿಕೃತ ಸೇರಿ 21 ಪಿಜಿಗಳು ಮಾರ್ಗಸೂಚಿ ಅನುಸರಿಸದ ಕಾರಣ ಮುಚ್ಚಲಾಗಿದೆ.