ಹೊಳೆಹೊನ್ನೂರು: ಪಟ್ಟಣದಲ್ಲಿ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಜೈ ಕರ್ನಾಟಕ ಕನ್ನಡ ಯುವಕರ ಸಂಘ, ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಸಂಘದ ಪದಾಧಿಕಾರಿಗಳು ಪಟ್ಟಣದ ನೃಪತುಂಗ ವೃತ್ತ, ಚನ್ನಗಿರಿ ರಸ್ತೆ, ಗಾಂಧಿ ವೃತ್ತ, ಭಗೀರಥ ವೃತ್ತ, ಪೇಟೆಬೀದಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನಾನಿರತರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಪ್ರತಿಭಟನಾಕಾರರು ಮುಂದೆ ಸಾಗುತ್ತಿದ್ದಂತೆ ಮಧ್ಯಾಹ್ನದ ವೇಳೆಗೆ ಬಾಗಿಲು ತೆರೆದು ಎಂದಿನಂತೆ ವ್ಯವಹಾರ ನಡೆಸಿದರು.
ನೃಪತುಂಗ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸರ್ಕಾರಿ ಕಚೇರಿಗಳು, ಆಸ್ಪತ್ರೆ, ಬ್ಯಾಂಕ್, ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿದ್ದವು. ವಾಹನ ಸಂಚಾರದಲ್ಲಿ ವ್ಯತ್ಯಯ ಕಂಡುಬರಲಿಲ್ಲ. ಪೇಟೆ ಬೀದಿ ಎಂದಿನಂತೆ ಜನಜಂಗುಳಿಯಿಂದ ತುಂಬಿತ್ತು.
ಪ್ರಮುಖರಾದ ಮಹೇಶ, ಎ.ನಾಗೇಶ, ಉಮೇಶ, ಎಚ್.ಜಿ.ವೆಂಕಟೇಶ, ಎಂ.ಹಾಲೇಶ್, ಪ್ರಕಾಶ, ಕೇಶವ, ದೇವೇಂದ್ರ, ರಾಜು, ಬಿಂಧು, ಸುಬ್ರಮಣಿ, ಕಲ್ಲೇಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.