ಜಿಲ್ಲೆ

ಸೆ.೧೧ ಕ್ಕೆ ಬೆಂಗಳೂರು ಬಂದ್ : ಕರ್ನಾಟಕ ರಾಜ್ಯ ಖಾಸಗಿ ಸಂಘಗಳ ಒಕ್ಕೂಟದಿಂದ ಬಂದ್‌ಗೆ ಕರೆ

ಮಂಜುನಾಥ.ಕೆ


ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿಯೋಜನೆಯಡಿ ನಷ್ಟಕ್ಕೊಳಗಾಗಿರುವ ಖಾಸಗಿ ಸಾರಿಗೆ ಚಾಲಕರು-ಮಾಲೀಕರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೆ.೧೧ ರಂದು ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಖಾಸಗಿ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ ಮಾತನಾಡಿ, ಶಕ್ತಿಯೋಜನೆ ಜಾರಿ ಬಳಿಕ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಖಾಸಗಿ ವಾಹನ ಒಕ್ಕೂಟದ ಜತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತುಕತೆ ನಡೆಸಿ, ನಿಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ, ಸರ್ಕಾರ ಆ. ೩೧ರೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿತ್ತು. ಈ ಬೇಡಿಕೆಗಳನ್ನು ಸರ್ಕಾರ ಇನ್ನು ಕೂಡ ಈಡೇರಸದ ಹಿನ್ನೆಲೆಯಲ್ಲಿ ಸೆ.೧೧ ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು.
೩೨ ಖಾಸಗಿ ಸಾರಿಗೆ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಸೆಪ್ಟೆಂಬರ್ ೧೦ ರ ಭಾನುವಾರ ರಾತ್ರಿ ೧೨ ಗಂಟೆಯಿಂದ ಸೋಮವಾರ ರಾತ್ರಿ ೧೨ ಗಂಟೆವರೆಗೆ ಆಟೋ, ಟ್ಯಾಕ್ಸಿ, ಕ್ಯಾಬ್, ಕಾರ್ಪೋರೇಟ್ ವಾಹನಗಳು, ಖಾಸಗಿ ಬಸ್, ಶಾಲಾ ಬಸ್ ಸೇರಿ ಇತರೆ ಖಾಸಗಿ ವಾಹನಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದರು.
ಸೆ.೧೧ ರಂದು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೆಳಗ್ಗೆ ೧೦.೩೦ ಕ್ಕೆ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಲಾಗುವುದು. ಈ ರ‌್ಯಾಲಿ ೧೧.೩೦ ಕ್ಕೆ ಸ್ವತಂತ್ರ ಉದ್ಯಾನವನ ತಲುಪಲಿದೆ. ನಂತರ ಸಂಜೆ ೭ ವರೆಗೆ ಅಲ್ಲಿಯೇ ಪ್ರತಿಭಟನೆ ನಡೆಸಲಾಗುತ್ತದೆ ಎಂದು ವಿವರಿಸಿದರು.
ಖಾಸಗಿ ವಾಹನ ಒಕ್ಕೂಟದ ಬೇಡಿಕೆಗಳೇನು?
ಚಾಲಕರಿಗೆ ೧೦ ಸಾವಿರ ರೂ.ಮಾಸಿಕ ಪರಿಹಾರ ಧನ
ರ‌್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸಂಪೂರ್ಣ ನಿಷೇಧ
ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ.
ನೇರ ಸಾಲ ಸೌಲಭ್ಯ ಯೋಜನೆಯಡಿ ಆಟೋ, ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು
ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಹೋಗುವುದಕ್ಕೆ ನಿಷೇಧಿಸಬೇಕು
ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ
ಓಲಾ, ಊಬರ್ ಆ್ಯಪ್ ಆಧಾರಿತ ಸೇವೆಗಳ ನಿರ್ಬಂಧ
ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ಅಡಿ ಸೇವೆಗೆ ಅವಕಾಶ
ಖಾಸಗಿ ವಾಹನಗಳನ್ನು ಕಿ.ಮೀ ಆಧಾರದಲ್ಲಿ ಸರ್ಕಾರ ಬಾಡಿಗೆಗೆ ಪಡೆಯುವುದು
ನಿಯಮ ಬಾಹಿರವಾಗಿ ವಾಹನ ವಶಕ್ಕೆ ಪಡೆಯುವ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು