ಜಿಲ್ಲೆ

ಬಂಡೆದ್ದರಿಗೆ ನರೇಗಲ್ಲ ಪಟ್ಟಣ ಪಂಚಾಯಿತಿ ಗದ್ದುಗೆ

ನರೇಗಲ್ಲ: ತೀವ್ರ ಕುತೂಹಲ ಕೆರಳಿಸಿದ್ದ ನರೇಗಲ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಚುಣಾವಣೆ ನಡೆಯಿತು. ಸ್ವಪಕ್ಷೀಯರ ವಿರುದ್ಧ ಮುನಿಸಿಕೊಂಡು ನಾಪತ್ತೆಯಾಗಿದ್ದ ಬಿಜೆಪಿಯ 6 ಸದಸ್ಯರ ಪೈಕಿ 14ನೇ ವಾರ್ಡ್‌ನ ಸದಸ್ಯ ಫಕೀರಪ್ಪ ಮಳ್ಳಿ ಅಧ್ಯಕ್ಷರಾಗಿ ಹಾಗೂ 17ನೇ ವಾರ್ಡ್‌ನ ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಂಡಾಯಗಾರರಿಗೆ ಕಾಂಗ್ರೆಸ್ ಬೆಂಬಲಿಸಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ಬಿಜೆಪಿಗೆ ಮುಜುಗರ: 17 ಸದಸ್ಯ ಬಲದ ಪಪಂನಲ್ಲಿ 13 ಬಿಜೆಪಿ ಸದಸ್ಯರಿದ್ದರೂ ಬಿಜೆಪಿಗೆ ಎರಡನೇ ಅವಧಿಯ ಅಧಿಕಾರ ಕೈ ತಪ್ಪಿದೆ. ಬಿಜೆಪಿಯ ಸ್ಥಳೀಯ ಮುಖಂಡರೊಬ್ಬರ ವೈಯಕ್ತಿಕ ದ್ವೇಷ ಹಾಗೂ ಪಕ್ಷದ ಸದಸ್ಯರಲ್ಲಿನ ಭಿನ್ನಾಭಿಪ್ರಾಯದ ಫಲವಾಗಿ ಬಿಜೆಪಿಯ 6 ಸದಸ್ಯರು ವಾರದ ಹಿಂದೆ ನಾಪತ್ತೆಯಾಗಿದ್ದರು. ಸೋಮವಾರ ಕಾಂಗ್ರೆಸ್ ಮುಖಂಡರೊಂದಿಗೆ ಪಪಂ ಕಚೇರಿಗೆ ಆಗಮಿಸಿದ 6 ಸದಸ್ಯರ ಪೈಕಿ 14ನೇ ವಾರ್ಡ್‌ನ ಸದಸ್ಯ ಫಕೀರಪ್ಪ ಮಳ್ಳಿ ಅಧ್ಯಕ್ಷ ಹಾಗೂ 17ನೇ ವಾರ್ಡ್‌ನ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ 4ನೇ ವಾರ್ಡ್‌ನ ಮಲ್ಲಿಕಾರ್ಜುನಗೌಡ ಭೂಮನಗೌಡ್ರ ಅಧ್ಯಕ್ಷ ಸ್ಥಾನಕ್ಕೆ ಹಾಗೂ 8ನೇ ವಾರ್ಡ್‌ನ ವಿಶಾಲಾಕ್ಷಿ ಹೊಸಮನಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್‌ನ 3 ಸದಸ್ಯರು, ಪಕ್ಷೇತರ ಸದಸ್ಯ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ 6 ಬಿಜೆಪಿ ಬಂಡಾಯ ಸದಸ್ಯರು ಸೇರಿ ಒಟ್ಟು 11 ಮತಗಳು ಕಾಂಗ್ರೆಸ್ ಬೆಂಬಲಿತರ ಪರವಾಗಿಯೇ ಚಲಾವಣೆಗೊಂಡವು. ಬಿಜೆಪಿ ಪರವಾಗಿ 7 ಸದಸ್ಯರು ಮತ ಚಲಾಯಿಸಿದರು. ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚು ಮತ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು.
ಸದಸ್ಯರ ಕಡೆಗಣನೆ ಆರೋಪ: ಚುನಾವಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಬಿಜೆಪಿಯಲ್ಲಿನ ಗುಂಪುಗಾರಿಕೆ ಮತ್ತು ಕೆಲ ಮುಖಂಡರ ಸ್ವಾರ್ಥ ಮನೋಭಾವ ವಿರೋಧಿಸಿ ಹೊರಕ್ಕೆ ಬಂದಿದ್ದೇವೆ. ಸದಸ್ಯರ ಸಭೆಗೂ ಮೊದಲೇ ಪಕ್ಷದ ಮುಖಂಡರು ‘ಇಂಥವರೇ’ ಮುಂದಿನ ಅಧ್ಯಕ್ಷರು ಎಂದು ಏಕಪಕ್ಷೀಯ ನಿರ್ಧಾರ ಪ್ರಕಟಿಸಿದ್ದು ಅಸಮಾಧಾನ ತರಿಸಿತ್ತು. ಅದರ ವಿರುದ್ಧ 6 ಸದಸ್ಯರು ಹೊರಬಂದು ಕಾಂಗ್ರೆಸ್ ಬೆಂಬಲ ಕೇಳಿದೆವು. ಅವರೂ ಬೆಂಬಲಿಸಿದರು. ಈಗಲೂ ನಾವು ಬಿಜೆಪಿಯಲ್ಲೇ ಇದ್ದೇವೆ ಎಂದರು.

ರಬ್ಬರ್ ಸ್ಟಾೃಂಪ್
ಬಿಜೆಪಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮಲ್ಲಿಕಾರ್ಜುನಗೌಡ ಭೂಮನಗೌಡ್ರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಅವಧಿಯಲ್ಲಿ ಪಕ್ಷದಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಬಹಳ ಇದೆ. ಅದನ್ನು ಮರೆತು ಅಧಿಕಾರದ ಆಸೆಯಿಂದ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಕಾಂಗ್ರೆಸ್‌ನವರು ಅಧ್ಯಕ್ಷ, ಉಪಾಧ್ಯಕ್ಷರನ್ನು ರಬ್ಬರ್ ಸ್ಟಾೃಂಪ್ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ನಾಪತ್ತೆಯಾದ ಬಿಜೆಪಿಯ 6 ಸದಸ್ಯರು ಸೇರಿ ಎಲ್ಲ 13 ಸದಸ್ಯರಿಗೂ ಭಾನುವಾರವೇ ವಿಪ್ ಜಾರಿಯಾಗಿತ್ತು. ಸೋಮವಾರ ನಡೆದ ಚುಣಾವಣೆಯಲ್ಲಿ ಬಿಜೆಪಿಯೊಂದಿಗೆ ಮುನಿಸಿಕೊಂಡ ಕಾಂಗ್ರೆಸ್‌ನ ಬೆಂಬಲದೊಂದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುಣಾವಣೆಯಲ್ಲಿ ಬಿಜೆಪಿಯ ವಿರುದ್ಧ ಮತ ಚಲಾಯಿಸಿದ 6 ಸದಸ್ಯರ ವಿರುದ್ಧ ಪಕ್ಷ ಚಟುವಟಿಕೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು.-ಮುತ್ತಣ್ಣ ಕಡಗದ, ಬಿಜೆಪಿ ರೋಣ ಮಂಡಲ ಅಧ್ಯಕ್ಷ ಬಿಜೆಪಿಯ ದುರಾಡಳಿತ ಮತ್ತು ಅಲ್ಲಿನ ಮುಖಂಡರ ವರ್ತನೆಗೆ ಬೇಸತ್ತು ಆರು ಜನ ಸದಸ್ಯರು ಬಿಜೆಪಿಯಿಂದ ಸಿಡಿದು ಬಂದು ನಮಗೆ ಬೆಂಬಲ ಕೊಡಿ ಎಂದು ಕೇಳಿದರು. ಅದಕ್ಕಾಗಿ ನಾವು, ಪಕ್ಷೇತರ ಸದಸ್ಯರೂ ಸೇರಿದಂತೆ ನಾಲ್ಕು ಜನರು ಮತ್ತು ನಾನು ಬಿಜೆಪಿ ವಿರೋಧಿ ಬಣದ ಸದಸ್ಯರಿಗೆ ಬೆಂಬಲ ನಿಡಿದೆವು. ಈಗ ಅದೇ ವಿರೋಧಿ ಬಣದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಮುಂದೆ ನರೇಗಲ್ಲ ಪಟ್ಟಣ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ.-ಜಿ.ಎಸ್. ಪಾಟೀಲ, ಶಾಸಕ