ಬೆಂಗಳೂರು: ನಗರದ ಬನಶಂಕರಿ ದೇವಸ್ಥಾನದಲ್ಲಿ 13ರಂದು ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದ್ದು, ಇದರ ಅಂಗವಾಗಿ 17ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 13ರಂದು ಬನದ ಹುಣ್ಣಿಮೆ ಅಂಗವಾಗಿ ಬೆಳಗ್ಗೆ ಮೃತ್ಯುಂಜಯ ಪುರಸ್ಸರ ನವಗ್ರಹ ಶಾಂತಿ, ದೇವಿ ಮೂಲಮಂತ್ರ ಹೋಮ, ರಥಾಂಗ ಹೋಮ, ರಥಬಲಿ ಇತ್ಯಾದಿಗಳು ನಡೆಯಲಿವೆ. ಮಧ್ಯಾಹ್ನ 12.45ಕ್ಕೆ ರಥಾವರೋಹಣ, 4.30ಕ್ಕೆ ಶ್ರೀ ಶಾಕಾಂಬರೀ ದೇವಿಯವರಿಗೆ ಮುತ್ತಿನ ಪಲ್ಲಕ್ಕಿ ಉತ್ಸವಗಳು ನಡೆಯಲಿವೆ.
14ರಂದು ಶ್ರೀ ಲಲಿತಾ ಸಹಸ್ರನಾಮ ಹೋಮ, ಸಂಜೆ 7ಕ್ಕೆ ಶ್ರೀ ಶಾಕಾಂಬರಿ ದೇವಿಯವರಿಗೆ ವಿಶೇಷ ಉಯ್ಯಲೋತ್ಸವ, 15ರಂದು ಶ್ರೀ ಶಾಕಾಂಬರಿ ಸಹಸ್ರನಾಮ ಹೋಮ, 16ರ ಬೆಳಗ್ಗೆ 10ಕ್ಕೆ ಶ್ರೀ ಗಿರಿಜಾ ಶಂಕರ ಕಲ್ಯಾಣೋತ್ಸವ, ಸಂಜೆ 4ಕ್ಕೆ ಶ್ರೀ ಅಮ್ಮನವರ ರಾಜಬೀದಿ ಉತ್ಸವ ಇರಲಿದೆ. 17ರಂದು ಬೆಳಗ್ಗೆ 8.30ಕ್ಕೆ ಉಪನ್ಯಾಸ ಪೂರ್ವಕ ಏಕಾದಶವಾರ ರುದ್ರಾಭಿಷೇಕ, ಶ್ರೀ ಬನಶಂಕರಿ ದೇವಿಯವರಿಗೆ ಮಹಾಭಿಷೇಕ ನಡೆಯಲಿದೆ.