ಜಿಲ್ಲೆ

ಬನಶಂಕರಿ ದೇವಾಲಯದಲ್ಲಿ ಭಕ್ತಸಾಗರ

ಪಂಕಜ ಕೆ.ಎಂ.

ಬೆಂಗಳೂರು: ಆಷಾಢ ಮಾಸದ ಮೂರನೇ ಶುಕ್ರವಾರದಂದು ನಗರದ ಬನಶಂಕರಿ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬನಶಂಕರಿ ದೇವಿಗೆ ವಿಶೇಷವಾಗಿ ಒಣ ಹಣ್ಣುಗಳ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದ ರಾತ್ರಿವರೆಗೂ ನಿರಂತರವಾಗಿ ಭಕ್ತರು ಆಗಮಿಸುತ್ತಿದ್ದರಿಂದ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ದರ್ಶನ ಪಡೆಯಲು ಬಯಸುವವರು 50 ರೂ. ಹಾಗೂ 350 ರೂ.ಗಳ ಟಿಕೆಟ್ ಪಡೆದು ದೇವರ ದರ್ಶನ ಪಡೆದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 40 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ದೇವಿಗೆ ಶುಕ್ರವಾರ ರಾಹುಕಾಲದಲ್ಲಿ ನಿಂಬೆ ಹಣ್ಣಿನ ದೀಪ, ಬೆಲ್ಲದ ಆರತಿ ಬೆಳಗುವುದು ವಾಡಿಕೆ. ಹಾಗಾಗಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ತಳ್ಳಾಟ ನೂಕಾಟ ಉಂಟಾಗಿ ಭಕ್ತರನ್ನು ನಿಯಂತ್ರಿಸಲು ದೇವಾಲಯದ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡಬೇಕಾಯಿತು.

ಆಷಾಢ ಶುಕ್ರವಾರ ಹಿನ್ನೆಲೆ ನಗರದ ರಾಜರಾಜೇಶ್ವರಿ, ನಿಮಿಷಾಂಭ, ಅಣ್ಣಮ್ಮ, ಬಂಡಿಕಾಳಿಯಮ್ಮ, ಗಂಗಮ್ಮದೇವಿ, ಮಾರಮ್ಮ ದೇವಿ ಸೇರಿ ವಿವಿಧ ದೇವಿ ದೇವಾಲಯಗಳು ದಿನಪೂರ್ತಿ ಭಕ್ತರಿಂದ ತುಂಬಿದ್ದವು.