ಜಿಲ್ಲೆ

ವರಮಹಾಲಕ್ಷ್ಮೀ ಹಬ್ಬಕ್ಕೆ ದೇವಾಲಯಗಳಲ್ಲಿ ಮಹಿಳೆಯರಿಗೆ ಅರಿಶಿನ ಕುಂಕುಮ ವಿತರಣೆ

ಪಂಕಜ ಕೆ.ಎಂ.

ಬೆಂಗಳೂರು: ಶ್ರೀ ವರಮಹಾಲಕ್ಷ್ಮೀ ವತ್ರದ ಪ್ರಯುಕ್ತ ಹಬ್ಬದ ದಿನ ಶುಕ್ರವಾರ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಡಿ ದೇವಾಲಯಗಳಿಗೆ ಆಗಮಿಸುವ ಮಹಿಳೆಯರಿಗೆ ಅರಿಶಿನ ಕುಂಕುಮ ನೀಡುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಈ ಸಂಬಂಧ ದೇವಾಲಯಗಳ ವತಿಯಿಂದ ಉತ್ತಮ ಗುಣಮಟ್ಟದ ಕಸ್ತೂರಿ ಅರಿಶಿನ- ಕುಂಕುಮ ಮತ್ತು ಹಸಿರು ಬಳೆಗಳನ್ನು ತಂದು ದೇವರ ಮುಂದೆ ಇಟ್ಟು ಪೂಜಿಸಿ. ಅವನ್ನು ಸರ್ಕಾರದ ಲಾಂಛನ ಇರುವ ಹಾಗೂ ದೇವಾಲಯದ ಹೆಸರನ್ನು ಮುದ್ರಿಸಿದ ಲಕೋಟೆಯಲ್ಲಿ ಮಹಿಳೆಯರಿಗೆ ನೀಡಬೇಕು. ಇದರ ವೆಚ್ಚವನ್ನು ಆಯಾ ದೇವಾಲಯಗಳ ನಿಧಿಯಿಂದ ಭರಿಸಬೇಕೆಂದು ಸೂಚಿಸಲಾಗಿದೆ.

ಶ್ರಾವಣ ಮಾಸದ ಶುಲ್ಕ ಪಕ್ಷದ ಪೌರ್ಣಮಿಯ ಮೊದಲ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಿಸುವುದು ಪುರಾಣೋಕ್ತವಾಗಿದ್ದು, ಆ ದಿನ ಮಹಾಲಕ್ಷ್ಮಿಯನ್ನು ಪೂಜಿಸಿ ದೇವಾಲಯಗಳಿಗೆ ತೆರಳಿ ಪ್ರಸಾದ, ನೈವೇದ್ಯ ಸ್ವೀಕರಿಸಿದರೆ ಸಕಲ ಸೌಭಾಗ್ಯಗಳು, ಅಷ್ಟ ಐಶ್ವರ್ಯಗಳು, ಚತುರ್ವಿದಲಗಳೂ, ಧನ ದಾನ್ಯಧಿಗಳು ಲಭಿಸುತ್ತದೆ ಎಂಬುದು ನಂಬಿಕೆ. ಆದ್ದರಿಂದ ನಾಡಿನ ಮಹಿಳೆಯರನ್ನು ಗೌರವಿಸುವ ಸಲುವಾಗಿ ಹಬ್ಬದ ದಿನದಂದು ದೇವಾಲಯಕ್ಕೆ ಬರುವ ಮಹಿಳೆಯರಿಗೆ ಅರಿಶಿನ ಕುಂಕುಮ ಹಾಗೂ ಹಸಿರು ಬಳಕೆಗಳನ್ನು ಗೌರವ ಸೂಚಕವಾಗಿ ನೀಡುವಂತೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಈ ಸಂಬಂಧ ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರಿಗೆ ಅರಿಶಿನ ಕುಂಕುಮ ಹಾಗೂ ಬಳೆ ನೀಡಲು ನಗರದ ಬನಶಂಕರಿ ದೇವಾಲಯಗಳಲ್ಲಿ ಗುರುವಾರ ಸಿದ್ಧತೆ ಅಧಿಕಾರಿ ಹಾಗೂ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ.