ಜಿಲ್ಲೆ

ಬನಶಂಕರಿ ದೇವಾಲಯದಲ್ಲಿ ಹುಂಡಿಗಳಲ್ಲಿ 43.10 ಲಕ್ಷ ರೂ. ಕಾಣಿಕೆ

ಪಂಕಜ ಕೆ.ಎಂ.

* ಮಲೇಷಿಯಾ, ಇಂಗ್ಲೆಂಡ್, ಓಮನ್ ಮತ್ತು ಭೂತಾನ್ ದೇಶಗಳ ಡಾಲರ್ ಲಭ್ಯ

ಬೆಂಗಳೂರು: ನಗರದ ಬನಶಂಕರಿ ದೇವಾಲಯದಲ್ಲಿ ಶನಿವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಒಂದೇ ತಿಂಗಳಲ್ಲಿ 43.10 ಲಕ್ಷ ಅಧಿಕ ಕಾಣಿಕೆ ಸಂಗ್ರಹವಾಗಿದೆ.

ಶಕ್ತಿ ಯೋಜನೆ ಪರಿಣಾಮ ಹಾಗೂ ಶ್ರಾವಣ ಮಾಸ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಒಂದೇ ತಿಂಗಳಲ್ಲಿ ದೇವಾಲಯದ ಎಲ್ಲಾ 13 ಹುಂಡಿಗಳು ತುಂಬಿದ್ದವು. ಈ ಹಿನ್ನೆಲೆಯಲ್ಲಿ ಹುಂಡಿಗಳನ್ನು ತೆರೆದು ಕಾಣಿಕೆ ಹಣ ಎಣಿಕೆ ಮಾಡಲಾಗಿದ್ದು, ನೋಟುಗಳು 41,84,095 ರೂ. ಹಾಗೂ ನಾಣ್ಯಗಳು 1,26,857 ರೂ. ಸೇರಿ ಒಟ್ಟು 43,10,952 ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ಬನಶಂಕರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ತಿಳಿಸಿದ್ದಾರೆ.

80 ಗ್ರಾಂ ಚಿನ್ನ :

ಹುಂಡಿಗಳಿಂದ 2 ಸಾವಿರ ರೂ. ಮುಖಬೆಲೆಯ 256 ನೋಟುಗಳು, 500 ರೂ.ನ 3,187 ನೋಟುಗಳು, 200 ರೂ.ನ 844 ನೋಟುಗಳು, 100 ರೂ. 9,827 ಹಾಗೂ 50 ರೂ.ಗಳ 6,263 ನೋಟುಗಳು ಸೇರಿ 20,10 ರೂ. 5 ರೂ. ನೋಟುಗಳು ಸಂಗ್ರಹವಾಗಿವೆ. ಜತೆಗೆ 80 ಗ್ರಾಂ 700 ಮಿಲಿ ಚಿನ್ನ ಹಾಗೂ 400 ಗ್ರಾಂ ಬೆಳ್ಳಿ ಕಾಣಿಕೆ ದೊರೆತಿವೆ.

12 ಡಾಲರ್‌ಗಳು:

ಕೇವಲ ನೋಟು, ನಾಣ್ಯಗಳೇ ಅಲ್ಲದೆ, ಈ ಬಾರಿ ಮಲೇಷಿಯಾ, ಇಂಗ್ಲೆಂಡ್, ಓಮನ್ ಮತ್ತು ಭೂತಾನ್ ದೇಶಗಳ 12 ಡಾಲರ್‌ಗಳು ದೊರೆತಿವೆ.

2 ಸಾವಿರ ನೋಟ್ ಬ್ಯಾನ್ ಎಫೆಕ್ಟ್:

ದೇವಾಲಯದ ಹುಂಡಿಯಲ್ಲಿ ಎರಡು ಸಾವಿರ ರೂ. ನೋಟುಗಳ ಎರಡು ಕಂತೆಗಳು ದೊರೆತಿವೆ. ತಲಾ ಒಂದು ಲಕ್ಷ ರೂ. ಮೊತ್ತದ ಎರಡು ಕಂತೆಗಳು. ಇನ್ನು ಮುಂದೆ ಎರಡು ಸಾವಿರ ರೂ. ನೋಟು ಚಲ್ತಿಯಲ್ಲಿ ಇಲ್ಲದ ಕಾರಣ ಬದಲಿಸಲು ಸಾಧ್ಯವಾಗದೆ ಹುಂಡಿಗೆ ಹಾಕಿರಬಹುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.